ಗೋಣಿಕೊಪ್ಪ ವರದಿ, ಜ. 4: ಅಮ್ಮತ್ತಿ ಗ್ರಾಮದಲ್ಲಿ ಹಲವು ತಿಂಗಳುಗಳಿಂದ ನಿರಂತರವಾಗಿ ನಡೆಯುತ್ತಿರುವ ಕಳ್ಳತನ ಪ್ರಕರಣದಿಂದ ಗ್ರಾಮವನ್ನು ಕಾಪಾಡಲು ಸಮರ್ಪಕ ಪೊಲೀಸ್ ಸಿಬ್ಬಂದಿ ನೇಮಿಸದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವದು ಎಂದು ಅಮ್ಮತ್ತಿ ಬಸವೇಶ್ವರ ದೇವಾಲಯ ಸಮಿತಿ ಉಪಾಧ್ಯಕ್ಷ ಪ್ರಿನ್ಸ್ ಗಣಪತಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಗ್ರಾಮಸ್ಥರು ಹಲವು ವರ್ಷಗಳಿಂದ ಸಹಬಾಳ್ವೆಯಿಂದ ಬದುಕುತ್ತಿದ್ದು, ಇತ್ತೀಚಿನ ಕಳ್ಳತನ ಪ್ರಕರಣಗಳಿಂದ ಗಾಬರಿಗೊಂಡಿದ್ದಾರೆ. ಆದರೆ ಸಮರ್ಪಕ ಪೊಲೀಸ್ ಸಿಬ್ಬಂದಿ ಇಲ್ಲದ ಕಾರಣ ಗ್ರಾಮಸ್ಥರು ಆತಂಕದಲ್ಲಿ ಜೀವನ ಸಾಗಿಸುವಂತಾಗಿದೆ. 1 ತಿಂಗಳಲ್ಲಿ ಅಮ್ಮತ್ತಿ ಪೊಲೀಸ್ ಉಪಠಾಣೆಗೆ ಸಿಬ್ಬಂದಿ ನೇಮಕ ಮಾಡದಿದ್ದಲ್ಲಿ ಪ್ರತಿಭಟನೆ ಮಾಡಲಾಗುವದು ಎಂದು ಎಚ್ಚರಿಸಿದರು.

ಇತ್ತೀಚೆಗಷ್ಟೆ ಮಸೀದಿಯಲ್ಲಿನ ಕಳ್ಳತನ, ಜೀಪ್ ಕಳವು, ಬೈಕ್ ಹಾಗೂ ಮನೆ ಕಳವು ಪ್ರಕರಣ ಹೆಚ್ಚಾಗುತ್ತಿದೆ. ಕೆಲವೊಂದು ಪ್ರಕರಣಗಳಲ್ಲಿ ಮಾತ್ರ ಪೊಲೀಸರಿಂದ ನ್ಯಾಯ ದೊರೆಕಿದೆ. ಸಿಬ್ಬಂದಿ ಕೊರತೆಯಿಂದ ಪಟ್ಟಣದಲ್ಲಿ ಪೊಲೀಸ್ ಇಲಾಖೆಯಿಂದ ಅವ್ಯವಸ್ಥೆ ಎದುರಿಸುವಂತಾಗಿದೆ ಎಂದರು.

ಕೆಲವು ಯುವಕರು ಮಾಧಕ ದ್ರವ್ಯ ಬಳಕೆಯಿಂದ ಪಟ್ಟಣದ ಕೆಲವೊಂದು ಸ್ಥಳಗಳನ್ನು ಅಡ್ಡೆಯಾಗಿ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಈ ರೀತಿಯ ಪ್ರಕರಣಗಳು ನಡೆಯುತ್ತಿದೆ. ಪಟ್ಟಣದ ಪೊಲೀಸ್ ಔಟ್ ಪೋಸ್ಟ್‍ನಲ್ಲಿ ಕೇವಲ ಇಬ್ಬರು ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಒಬ್ಬ ಸಿಬ್ಬಂದಿ ಕಚೇರಿ ನಿರ್ವಹಣೆ ಮಾಡಿಕೊಳ್ಳುತ್ತಿದ್ದಾರೆ. ಮತ್ತೊಬ್ಬರನ್ನು ಬೇರೆ ಸ್ಥಳಗಳಿಗೆ ಇಲಾಖೆ ವತಿಯಿಂದ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ಪೊಲೀಸ್ ಇಲಾಖೆಯಿಂದ ನ್ಯಾಯ ದೊರೆಯದಂತಾಗಿದೆ ಎಂದರು.

ಪೊಲೀಸ್ ಅವ್ಯವಸ್ಥೆ ಅರಿತು ಇಂತಹ ಕೃತ್ಯಗಳಿಗೆ ಕೈಹಾಕುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಇದರ ಬಗ್ಗೆ ಗಮನಹರಿಸಿ ಸಾಕಷ್ಟು ಸಿಬ್ಬಂದಿ ನೇಮಿಸಬೇಕೆಂದು ಒತ್ತಾಯಿಸಿದರು.

ದೇವಾಲಯ ಸಮಿತಿ ಖಜಾಂಚಿ ಉದ್ದಪಂಡ ಜಗತ್ ಮಾತನಾಡಿ, ಅಮ್ಮತ್ತಿ ಪಟ್ಟಣದಲ್ಲಿ ಪೊಲೀಸ್ ನೈಟ್ ಬೀಟ್ ವ್ಯವಸ್ಥೆ ಇಲ್ಲದಿರುವದರಿಂದ ಕಾರ್ಯನಿರ್ವಹಿಸುತ್ತಿರುವ ಇಬ್ಬರು ಅಥವಾ ಮೂರು ಸಿಬ್ಬಂದಿಗಳಿಗೆ ಇದನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯಲ್ಲಿ ಕಾಫಿ ಹಾಗೂ ಕಾಳುಮೆಣಸು ಕೊಯ್ಲು ನಡೆಯುತಿದ್ದು ಪೊಲೀಸರು ಕಳ್ಳರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ರೈತರು ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಈ ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ವೀರಾಜಪೇಟೆ ತಾಲೂಕು ಪೊಲೀಸ್ ಉಪಅಧೀಕ್ಷಕರು ಸಾಕಷ್ಟು ಸಿಬ್ಬಂದಿ ನೇಮಿಸಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ದೇವಾಲಯದ ಸಮಿತಿ ಸದಸ್ಯ ಗುರುರಾಜ್ ಉಪಸ್ಥಿತರಿದ್ದರು.