ಚೆಟ್ಟಳ್ಳಿ, ಜ. 4: ಕೊಡಗಿನಲ್ಲಿ ಕಾಫಿಯೊಂದಿಗೆ ಉಪ ಉತ್ಪನ್ನವಾಗಿ ಕರಿಚಿನ್ನವೆಂದು ಕರೆಯಲ್ಪಡುವ ಕರಿಮೆಣಸು ಬೆಳೆಯಲಾಗುತ್ತದೆ. ಕಾಫಿ ಫಸಲು ಕುಯ್ಲು ಆದನಂತರ ಫಸಲಿಗೆ ಬರುತ್ತದೆ. ಆದರೆ ಇನ್ನೇನು ಕೈಗೆಬಂದ ತುತ್ತು ಬಾಯಿಗೆ ಬಂತೆನ್ನು ವಾಗಲೇ ಕರಿಮೆಣಸಿಗೆ ಎಲೆಹಳದಿ ಕಟ್ಟುವ ಖಾಯಿಲೆ, ಬೇರಿಗೆ ಹಲವು ಶಿಲೀಂದ್ರಗಳಿಂದ ಬರುವ ರೋಗಗಳಿಂದ ನಿಯಂತ್ರಿಸಲು ಸಾಧ್ಯ ವಾಗದೇ ರೈತ ಒಂದೆಡೆ ಸೊರಗುತ್ತಿ ರುವಾಗ ಬಲಿತ ಕರಿಮೆಣಸನ್ನು ಯಾವದೋ ಒಂದು ಕೀಟ ತಿಂದು ಉದುರಿಸಿರುವದು ಚೆಟ್ಟಳ್ಳಿಯ ಐಯ್ಯಂಡ್ರ ಮೋಹನ್ ಎಂಬವರ ತೋಟದಲ್ಲಿ ಕಂಡುಬಂದಿದೆ.
ಕಳೆದೆರಡು ದಿನಗಳ ಹಿಂದೆ ಮೋಹನ್ ತನ್ನ ತೋಟದಲ್ಲಿ ಬೆಳೆದಿದ್ದ ಮೆಣಸು ಬಳ್ಳಿಗಳನ್ನು ಗಮಸಿದಾಗ ಫಸಲಿರುವ ಒಂದು ಬಳ್ಳಿಯ ಸಂಪೂರ್ಣ ಮೆಣಸು ಮಣಿಗಳನ್ನು ತಿಂದು ಹಾಕಿದಲ್ಲದೆ ಬುಡದಲ್ಲಿ ಉದುರಿರುವದು ಕಂಡು ಬಂದಿದೆ. ಕೀಟಗಳನ್ನು ಬಳ್ಳಿಯಲ್ಲಿ ಹುಡುಕಾಡಿ ದರೂ ಕಾಣಸಿಗಲಿಲ್ಲ. ರಾತ್ರಿಯಾಗು ತ್ತಲೇ ಕೀಟಗಳು ಕರಿಮೆಣಸು ಮಣಿಗಳನ್ನು ತಿಂದು ಹಾಕುತ್ತಿರ ಬಹುದೆಂಬ ಸಂಶಯ ಮೋಹನ್ ಅವರದ್ದು. ಕರಿಮೆಣಸು ಮಣಿಗಳು ಬಲಿತನಂತರ ಕೀಟಗಳು ಮಣಿಗಳನ್ನು ತಿಂದು ಹಾಕುವದು ತೀರಾ ಅಪರೂಪವಾಗಿದ್ದು, ಬೇರೆಗಿಡಗಳಿಗೆ ಹರಡದಂತೆ ಶೀಘ್ರದಲ್ಲಿ ಕೀಟನಾಶಕಗಳನ್ನು ಸಿಂಪಡಿಸ ಬೇಕೆಂದು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ತಜ್ಞರಾದ ವೀರೇಂದ್ರ ಕುಮಾರ್ ಸಲಹೆ ನೀಡಿದ್ದಾರೆ.
ಬೆಲೆ ಕುಸಿತದೊಂದಿಗೆ ಅತಂತ್ರ ಸ್ಥಿತಿಯಲ್ಲಿರುವ ಬೆಳೆಗಾರರಿಗೆ ಕರಿಮೆಣಸಿನಿಂದ ಕಿಂಚಿತ್ತಾದರೂ ಸುಧಾರಣೆ ಆಗುತ್ತಿತ್ತು. ಕಾಫಿಗೆ ಶಂಖು ಹುಳು, ಭತ್ತಕ್ಕೆ ಕೀಟ ಬಾಧೆಯಿಂದ ಪರಿತಪಿಸುತ್ತಿರುವಾಗ ಇದೀಗ ಅಳಿದುಳಿದಿರುವ ಮೆಣಸಿಗೂ ಕೀಟದ ವಕ್ರದೃಷ್ಟಿ ಬಿದ್ದಿರುವದು ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
-ಪುತ್ತರಿರ ಕರುಣ್ ಕಾಳಯ್ಯ