ಕೂಡಿಗೆ, ಜ. 3: ಸಮೀಪದ ಹೆಬ್ಬಾಲೆಯ ಸೀಕ್ರೆಡ್ ಹಾರ್ಟ್ ಶಾಲೆ ಯಲ್ಲಿ ಯುವ ಬರಹಗಾರ ಬಿ.ಎ. ಮಧುಕರ್ ಅವರ ಚೊಚ್ಚಲ ಕಾದಂಬರಿ ‘ಒಂದು ಆಸೆ ನೂರು ಕನಸು’ ಪುಸ್ತಕ ಬಿಡುಗಡೆ ಸಮಾರಂಭ ನಡೆಯಿತು. ಸೋಮವಾರಪೇಟೆ ತಾಲೂಕು ವೈದ್ಯಾಧಿಕಾರಿ ರವಿಕುಮಾರ್ ಪುಸ್ತಕ ಬಿಡುಗಡೆ ಮಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಸಾಹಿತಿಗಳಿಗಾಗಿ ಸಾಹಿತ್ಯ ಪರಿಷತ್ತು ಜಿಲ್ಲೆಯಾದ್ಯಂತ ಹೆಚ್ಚು ಕಾರ್ಯ ಕ್ರಮಗಳನ್ನು ರೂಪಿಸಿಕೊಡುತ್ತಿದೆ. ಹಾಗೆಯೇ ಯುವ ಬರಹಗಾರರಿಗೂ ಹೆಚ್ಚು ಉತ್ತೇಜನ ನೀಡುತ್ತಿದೆ ಎಂದರು.
ಕವಯತ್ರಿ, ಶಿಕ್ಷಕಿ ಕೆ.ಕೆ. ಸುನೀತ ಲೋಕೇಶ್ ಮಾತನಾಡಿ, ಯುವ ಬರಹಗಾರರು ಪುಸ್ತಕಗಳನ್ನು ಓದುವ ಹಾಗೂ ಬರವಣಿಗೆಯಲ್ಲಿ ತೊಡಗಿಸಿ ಕೊಂಡು ಸಾಹಿತ್ಯ ಕೃಷಿಯನ್ನು ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಣಿವೆಯ ಸಾಹಿತಿ ಭಾರದ್ವಜ್ ಮಾತನಾಡಿ, ವಿದ್ಯಾರ್ಥಿ ಗಳು ದಿನನಿತ್ಯದ ಪತ್ರಿಕೆ, ಪುಸ್ತಕಗಳನ್ನು ಓದುವದನ್ನು ಮತ್ತು ಬರವಣಿಗೆಗಳನ್ನು ಪ್ರಾಥಮಿಕ ಹಂತದಲ್ಲೇ ಪ್ರಥಮ ಆಧ್ಯತೆ ನೀಡಿ ವಿದ್ಯಾರ್ಥಿದೆಸೆಯಲ್ಲೇ ಹವ್ಯಾಸದಂತೆ ತೊಡಗಿಸಿಕೊಂಡಾಗ ಇತರೆ ಕೃತ್ಯಗಳಲ್ಲಿ ತೊಡಗುವ ಬಾವನೆಗೆ ಸೆಳೆತವಿರುವದಿಲ್ಲ ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಕುಶಾಲನಗರ ಹೋಬಳಿ ಘಟಕದ ಅಧ್ಯಕ್ಷ ಎಂಡಿ ರಂಗಸ್ವಾಮಿ ಮಾತನಾಡಿದರು.
ಈ ಸಂದರ್ಭ ದಕ್ಷಿಣ ಭಾರತದ ಯುವಜನ ಮೇಳದ ರಾಜ್ಯಮಟ್ಟ ಪೂಜಾ ಕುಣಿತ ಸ್ಪರ್ಧೆಯಲ್ಲಿ ವಿಜೇತರಾಗಿ ಫೆ. 15 ರಂದು ಜಾರ್ಖಂಡ್ನ ರಾಂಚಿಯಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಕಸಾಪ ಹಿರಿಯ ಸದಸ್ಯ ಹೆಬ್ಬಾಲೆ ಗ್ರಾಮದ ಉಮೇಶ್ ಮತ್ತು ವಾಣಿ ದಂಪತಿಗಳ ಪುತ್ರಿ ಮೇಘನಾ ಭಟ್ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನಿಂದ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಸೋಮವಾರಪೇಟೆ ತಾಲೂಕು ಕರವೇ ಅಧ್ಯಕ್ಷ ದೀಪಕ್, ಸೋಮವಾರಪೇಟೆ ತಾಲೂಕು ಕಾ.ಸಾ.ಪ. ಅಧ್ಯಕ್ಷ ವಿಜೇತ್, ಶಾಲಾ ಮುಖ್ಯೋಪಾಧ್ಯಾಯ ಹೆಚ್.ಎಸ್. ಲೋಕೇಶ್, ಉ.ರಾ. ನಾಗೇಶ್ ಬರಹಗಾರ ಮಧುಕರ್ ಭಾಗಿಯಾಗಿದ್ದರು.