ಭಾಗಮಂಡಲ, ಜ. 3: ಭಾಗಮಂಡಲ-ಕರಿಕೆ ರಸ್ತೆಯನ್ನು ದುರಸ್ತಿಪಡಿಸಲು ಜಿಲ್ಲಾ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‍ಗೆ ಸೂಚಿಸಿದರೂ ನಮ್ಮ ಮಾತಿಗೆ ಕಿಮ್ಮತ್ತಿನ ಗೌರವ ನೀಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಶಾಸಕ ಕೆ.ಜಿ. ಬೋಪಯ್ಯ, ಪಾಣತ್ತೂರು-ಮಡಿಕೇರಿವರೆಗೆ ರಾಷ್ಟ್ರೀಯ ಹೆದ್ದಾರಿಯಾಗಬೇಕಾದುದು ಅನಿವಾರ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕರಿಕೆಯಲ್ಲಿ ನಡೆದ ಮಡಿಕೇರಿ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಷಯ ಪ್ರಸ್ತಾಪಿಸಿ, ಭಾಗಮಂಡಲ-ಕರಿಕೆ ರಸ್ತೆಯನ್ನು ದುರಸ್ತಿಪಡಿಸಲು ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಲೋಕೋಪಯೋಗಿ ಇಂಜಿನಿಯರ್‍ಗೆ ಖುದ್ದು ಹೇಳಿದರೂ ಅವರು ತನ್ನ ಮಾತಿಗೆ ಕಿಂಚಿತ್ತೂ ಗೌರವವನ್ನು ನೀಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನೆಲೆ ಕೇಂದ್ರ ಸರಕಾರದ ಉದ್ದೇಶಿತ ಪಾಣತ್ತೂರು-ಮಡಿಕೇರಿವರೆಗೆ ರಾಷ್ಟ್ರೀಯ ಹೆದ್ದಾರಿಯಾಗಬೇಕು. ಈ ಯೋಜನೆಯನ್ನು ವಿರೋಧಿಸುವವರು ತಮ್ಮ ಐಷಾರಾಮಿ ವಾಹನಗಳಲ್ಲಿ ಸಂಚರಿಸುವರು, ಪರಿಸರದ ಮೇಲೆ ಜಿಲ್ಲೆಯ ಪ್ರತಿಯೊಬ್ಬರಿಗೂ ಕಾಳಜಿ ಇದೆ. ಪರಿಸರವನ್ನು ಉಳಿಸಲೂ ಗೊತ್ತಿದೆ. ಇದನ್ನು ಯಾರೂ ಕೊಡಗಿನವರಿಗೆ ಹೇಳಬೇಕಾಗಿಲ್ಲ. ಕೊಡಗಿನವರ ತೋಟಗಳಲ್ಲಿರುವ ಹಚ್ಚ ಹಸುರಿನ ಪರಿಸರ ಅರಣ್ಯದಲ್ಲೂ ಇಲ್ಲ ಎಂದರು. ಆದರೆ ಕೊಡಗಿನವರ ಬದುಕಿಗೆ ರಸ್ತೆಗಳ ಅಗತ್ಯವಿದೆ. ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ ರಸ್ತೆ ದುರಸ್ತಿಪಡಿಸುವದು ಅಥವಾ ಪಾಣತ್ತೂರುನಿಂದ ಮಡಿಕೇರಿವರೆಗೆ ಹೆದ್ದಾರಿಯನ್ನು ನಿರ್ಮಿಸುವದು ಅನಿವಾರ್ಯವಾಗಿದೆ ಎಂದು ಹೇಳಿದರು.
ಭಾಗಮಂಡಲ-ಕರಿಕೆ ರಸ್ತೆಯನ್ನು ದುರಸ್ತಿಪಡಿಸದ ಹಿನ್ನೆಲೆ ಈ ರಸ್ತೆಯಲ್ಲಿ ಪ್ರಸ್ತುತ ಯಾವ ವಾಹನಗಳು ಸಂಚರಿಸಲಾಗುತ್ತಿಲ್ಲ. ಎರಡು ವಾಹನಗಳು ಪರಸ್ಪರ ದಾರಿ ಬಿಡಲು ಆಗುತ್ತಿಲ್ಲ. ರಸ್ತೆಯ ಎರಡೂ ಬದಿಗಳ ಫುಟ್ಫಾತ್‍ಗಳು ಹಾನಿಗೊಳಗಾಗಿ ಎರಡೂ ಬದಿಗಳ ಕಾಡುಗಳು ರಸ್ತೆಗೆ ಬಾಗಿದ್ದರಿಂದ ಜನರಿಗೆ ಹಾಗೂ ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಬಸ್ ಮತ್ತಿತರ ವಾಹನಗಳಲ್ಲಿ ಸಂಚರಿಸುವವರ ಮುಖಕ್ಕೆ ಮುಳ್ಳು ಕಾಡುಗಳು ರಾಚುತ್ತವೆ, ಪಾದಚಾರಿಗಳು ನಡೆದಾಡಲು ದಾರಿಯೇ ಇಲ್ಲದಂತಾಗಿದೆ ಎಂದರು.