ಪೊನ್ನಂಪೇಟೆ, ಜ. 3: ರಾಜಕೀಯ ಜಂಜಾಟಗಳ ನಡುವೆಯೂ ಜಿ.ಪಂ. ಸದಸ್ಯರೊಬ್ಬರು ವಿಶೇಷ ಚೇತನ ಮಕ್ಕಳೊಂದಿಗೆ ದಿನವಿಡೀ ಕಾಲಕಳೆದು ಅವರಲ್ಲಿ ವಿಶ್ವಾಸ ಮೂಡಿಸುವ ಪ್ರಯತ್ನ ಮಾಡಿದರು. ವಿಶೇಷ ಮಕ್ಕಳ ಶಾಲೆಗೆ ಭೇಟಿ ನೀಡಿದ ಬಾಳೆಲೆ ಕ್ಷೇತ್ರದ ಜಿ.ಪಂ. ಸದಸ್ಯ ಬಿ.ಎನ್. ಪ್ರಥ್ಯು ವಿಶೇಷ ಮಕ್ಕಳಿಗೆ ದಿನಕ್ಕೆ ಬೇಕಾಗುವ ಆಹಾರ ಪದಾರ್ಥಗಳನ್ನು ನೀಡಿ ಮಾನವೀಯತೆ ಮೆರೆದು ಮಾದರಿಯಾಗಿದ್ದಾರೆ.
ಗೋಣಿಕೊಪ್ಪಲು ಸಮೀಪದ ದೇವರಪುರದಲ್ಲಿರುವ ಅಮೃತವಾಣಿ ವಿಶೇಷ ಮಕ್ಕಳ ಶಾಲೆಗೆ ಬುಧವಾರದಂದು ಶಾಲೆಗೆ ಭೇಟಿ ನೀಡಿದ ಬಿ.ಎನ್. ಪ್ರಥ್ಯು ಅವರು, ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿಶೇಷ ಮಕ್ಕಳಿಗೆ ಪ್ರತಿವರ್ಷ ನೀಡುವಂತೆ ಈ ಬಾರಿಯೂ ದಿನಕ್ಕೆ ಬೇಕಾಗುವ ಅಕ್ಕಿ, ಬೇಳೆ, ತೆಂಗಿನಕಾಯಿ, ಮೊಟ್ಟೆ, ತುಪ್ಪ ಮೊದಲಾದ ಆಹಾರ ಪದಾರ್ಥಗಳನ್ನು ನೀಡಿದರು.
ಬಳಿಕ ದಿನವಿಡೀ ವಿಶೇಷ ಚೇತನ ಮಕ್ಕಳೊಂದಿಗೆ ಸಮಯ ಕಳೆದ ಬಿ.ಎನ್. ಪ್ರಥ್ಯು ಅವರು, ಅವರೊಂದಿಗೆ ಬೆರೆತು ವಿಶೇಷ ಚೇತನ ಮಕ್ಕಳಲ್ಲಿ ವಿಶ್ವಾಸ ತುಂಬಿದರು. ಇದೇ ವೇಳೆ ಮಾತನಾಡಿದ ಅವರು, ವಿಶೇಷ ಚೇತನ ಮಕ್ಕಳನ್ನು ನಮ್ಮವರೆಂದು ಪರಿಗಣಿಸಿ ಅವರಿಗೆ ಹೆಚ್ಚಿನ ಆಧ್ಯತೆ ನೀಡುವಂತಾಗಬೇಕು ಎಂದರು.
ಇದೇ ವೇಳೆ ಅಮೃತವಾಣಿ ಶಾಲೆಗೆ ತೆರಳುವ ರಸ್ತೆ ಅಭಿವೃದ್ದಿ ಬಗ್ಗೆ ಶಾಲಾ ಮುಖ್ಯಸ್ಥರು ಜಿ.ಪಂ. ಸದಸ್ಯರ ಗಮನ ಸೆಳೆದಾಗ ಸಂಬಂಧಿಸಿದವರೊಂದಿಗೆ ಚರ್ಚಿಸಿ ಅನುದಾನ ಒದಗಿಸಲು ಪ್ರಯತ್ನಿಸುವದಾಗಿ ಪ್ರಥ್ಯು ಭರವಸೆ ನೀಡಿದರು.
ತಿತಿಮತಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ವಿಲ್ಸನ್, ಅಮೃತವಾಣಿ ವಿಶೇಷ ಚೇತನ ಮಕ್ಕಳ ಶಾಲೆಯ ಮುಖ್ಯಸ್ಥರಾದ ರೆ.ಫಾ. ಜ್ಯೋತಿಲಾಲ್, ಫಾ. ಸುನಿತ್, ಶಿಕ್ಷಕರಾದ ರಜೀನಾ, ಎಲ್ಸಿನಾ, ಮೆರ್ಸಿ ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.