ಸಿದ್ದಾಪುರ, ಜ.3 : ದಲಿತರ ಹಾಗೂ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ವಿರೋಧಿಸಿ ತಾ. 6 ರಂದು ಮಡಿಕೇರಿಯಲ್ಲಿ ಸಮಾನ ಮನಸ್ಕರ ವೇದಿಕೆ ವತಿಯಿಂದ ಹಮ್ಮಿಕೊಂಡಿರುವ ಪ್ರತಿಭಟನಾ ಸಮಾವೇಶಕ್ಕೆ ಡಾ. ಬಿ.ಆರ್ ಅಂಬೇಡ್ಕರ್ ಆದಿದ್ರಾವಿಡ ಪೌರಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಯುಕ್ತ ಸಂಘ ಬೆಂಬಲ ಸೂಚಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ರಂಜಿತ್ ಕುಮಾರ್ ಮಾತನಾಡಿ, ವಿಜಯಪುರದಲ್ಲಿ ನಡೆದ ವಿದ್ಯಾರ್ಥಿನಿ ದಾನಮ್ಮ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನು ಖಂಡಿಸಿದರು. ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಕೊಡಗು ಜಿಲ್ಲೆಯಲ್ಲೂ ದಲಿತರ ಮೇಲೆ ಹಲವು ರೀತಿಯಲ್ಲಿ ದೌರ್ಜನ್ಯಗಳು ನಡೆಯುತ್ತಿದ್ದು, ಇದರ ವಿರುದ್ಧ ಜನ ಜಾಗೃತಿ ಮೂಡಿಸುವದು ಅತ್ಯಗತ್ಯವಾಗಿದೆ. ಸಂವಿಧಾನ ಬದಲಾಯಿಸುವ ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿಕೆಯನ್ನು ತೀವ್ರವಾಗಿ ಖಂಡಿಸುವದಾಗಿ ತಿಳಿಸಿದ ಅವರು, ಜ. 6 ರಂದು ನಡೆಯುವ ಸಮಾವೇಶಕ್ಕೆ ಸಂಘದ ಬೆಂಬಲವನ್ನು ಸೂಚಿಸಿದರು. ಗೋಷ್ಠಿಯಲ್ಲಿ ಸಂಘದ ಕೋಶಾಧಿಕಾರಿ ಬಿ. ಮಂಜುನಾಥ್, ಸದಸ್ಯರಾದ ಸುಬ್ರಮಣಿ, ವಿನೋದ್, ಮಂಜಮ್ಮ ಇದ್ದರು.