ಶ್ರೀಮಂಗಲ, ಜ. 3: ಪೊನ್ನಂಪೇಟೆ ತಾಲೂಕು ರಚನೆಗೆ ಆಗ್ರಹಿಸಿ 64ನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹದಲ್ಲಿ ಹುದಿಕೇರಿ ತ್ರಿವೇಣಿ ಮಹಿಳಾ ಸೇವಾ ಸಮಿತಿ, ಮಹಿಳಾ ಸಮಾಜ ಹುದಿಕೇರಿ, ಅಯ್ಯಪ್ಪ ಭದ್ರಕಾಳಿ, ಚಾಮುಂಡಿ ದೇವಸ್ಥಾನ ಸಮಿತಿ ಹುದಿಕೇರಿ ಅಧ್ಯಕ್ಷರು ಹಾಗೂ ಸದಸ್ಯರು, ಯುಕೊ ಸಂಘಟನೆ ಹಾಗೂ ಪೊನ್ನಂಪೇಟೆಯ ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷರು ಹಾಗೂ ಸದಸ್ಯರು ಪಾಲ್ಗೊಂಡು ಮಾನವ ಸರಪಳಿಯನ್ನು ರಚಿಸಿ ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ತ್ರಿವೇಣಿ ಮಹಿಳಾ ಸೇವಾ ಸಮಿತಿಯ ಅಧ್ಯಕ್ಷೆ ತೀತಿರ ಊರ್ಮಿಳಾ 2001ರಿಂದಲೇ ಪೊನ್ನಂಪೇಟೆ ತಾಲೂಕು ರಚನೆಗೆ ಆಗ್ರಹಿಸಿ ಪ್ರತಿಭಟನೆಗಳು ನಡೆಯುತ್ತಿದೆ. ಆದರೂ ಯಾವುದೇ ಸರಕಾರ ಈ ಬಗ್ಗೆ ಗಮನ ಹರಿಸದಿರುವದು ವಿಷಾದನೀಯ ಎಂದರು.
ಯುಕೊ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಕ್ಗ್ಗಟ್ಟ್ನಾಡ್ ತಾಲೂಕಾಗಿ ಗುರುತಿಸಿಕೊಂಡಿದ್ದ ಪೊನ್ನಂಪೇಟೆ ತದನಂತರ ರಾಜಕೀಯ ಇಚ್ಚಾಶಕ್ತಿಯ ಕೊರತೆಯಿಂದ ಎಲ್ಲವನ್ನು ಕಳೆದುಕೊಳ್ಳುವಂತಾಗಿದೆ. ಕ್ಗ್ಗಟ್ಟ್ನಾಡ್ ಎಂಬದು ಆತ್ಮಗೌರವದ ಸಂಕೇತ. ಹಲವು ಹೋರಾಟಗಳಿಗೆ ವೇದಿಕೆಯಾದ ಕ್ಗ್ಗಟ್ಟ್ನಾಡಿನ ಜನರ ಪರೀಕ್ಷೆಗೆ ಸರಕಾರ ಹಾಗೂ ಜನಪ್ರತಿನಿಧಿಗಳು ಮುಂದಾಗುವದು ಬೇಡ. ಇಷ್ಟು ವರ್ಷಗಳ ಕಾಲ ರಾಜಕೀಯ ಮೇಲಾಟದಿಂದ ಎಲ್ಲವನ್ನು ಕಳೆದುಕೊಳ್ಳುವ ಹಂತಕ್ಕೆ ನಾವುಗಳು ಬಂದು ತಲುಪಿದ್ದು ಮುಂದಿನ ಚುನಾವಣೆಯಲ್ಲಿ ನಿರ್ಣಾಯಕ ಹೆಜ್ಜೆಯನ್ನು ಇಡಬೇಕಾಗಿದೆ ಎಂದರು.
ಈ ಸಂದರ್ಭ ಮಹಿಳಾ ಸಮಾಜ ಹುದಿಕೇರಿಯ ಅಧ್ಯಕ್ಷರಾದ ಕಿರಿಯಮಾಡ ಕುಸುಮ, ಅಯ್ಯಪ್ಪ ಭದ್ರಕಾಳಿ, ಚಾಮುಂಡಿ ದೇವಸ್ಥಾನ ಸಮಿತಿ ಹುದಿಕೇರಿ ಇದರ ಅಧ್ಯಕ್ಷ ಬೊಳ್ಳಜಿರ ಸುಧಿ, ಜಿ.ಪಂ. ಮಾಜಿ ಸದಸ್ಯ ಮೂಕಳೇರ ಕುಶಾಲಪ್ಪ, ಕೋಳೇರ ದಯಾ ಚಂಗಪ್ಪ, ಚೆಪ್ಪುಡಿರ ಸೋಮಯ್ಯ, ಆಲೀರ ಎರ್ಮು ಹಾಜಿ, ಕಾಟಿಮಾಡ ಜಿಮ್ಮಿ ಅಣ್ಣಯ್ಯ ಮುಂತಾದವರು ತಾಲೂಕು ರಚನೆಯ ಬಗ್ಗೆ ಮಾತನಾಡಿದರು.
ಪ್ರತಿಭಟನೆಯಲ್ಲಿ ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಪೊಕ್ಕಳಿಚಂಡ ಪೂಣಚ್ಚ, ಚೆಪ್ಪುಡಿರ ಪೊನ್ನಪ್ಪ, , ಕಾಳಿಮಾಡ ಮೋಟಯ್ಯ, ಮತ್ರಂಡ ಅಪ್ಪಚ್ಚು, ಕೋಟ್ರಂಗಡ ಬೋಪಯ್ಯ, ಪುಚ್ಚಿಮಾಡ ಹರೀಶ್ ದೇವಯ್ಯ, ಮದ್ರೀರ ಮುತ್ತಪ್ಪ, ಪೆಮ್ಮಂಡ ಪ್ರಸಾದ್, ಚಕ್ಕೇರ ಸುಬ್ಬಯ್ಯ, ಕಾಟಿಮಾಡ ನಂಜಪ್ಪ, ಸೋಮಯ್ಯ ಮತ್ತಿತರರು ಭಾಗವಹಿಸಿದ್ದರು.