ವೀರಾಜಪೇಟೆ, ಜ.3: ಸಿದ್ದಾಪುರ ಬಳಿಯ ಬೆಟ್ಟಗೇರಿ ಹೊಸೂರು ಗ್ರಾಮದ ಪಣಿಎರವರ ಚಿಣ್ಣಪ್ಪ (38) ಎಂಬಾತ ತನ್ನ ಪತ್ನಿ ಸೋನಿ (28) ಎಂಬಾಕೆಗೆ ದೊಣ್ಣೆಯಿಂದ ಹಲ್ಲೆ ನಡೆಸಿದಲ್ಲದೆ ಇದರಿಂದ ಆಕೆ ಸಾವನ್ನಪ್ಪದಿದ್ದಾಗ ನೆಲದ ಮೇಲೆ ಬೀಳಿಸಿ ಉಸಿರು ಕಟ್ಟಿಸಿ ಕೊಲೆ ಮಾಡಿದ ಆರೋಪದ ಮೇರೆ ಇಲ್ಲಿನ ಅಪರ ಹಾಗೂ ಎರಡನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಮೋಹನ್ ಪ್ರಭು ಅವರು ಆರೋಪಿ ಚಿಣ್ಣಪ್ಪನಿಗೆ ಜೀವಾವಧಿ ಶಿಕ್ಷೆ ಹಾಗೂ ರೂ. 5000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ತಾ. 2-11-2016ರಂದು ರಾತ್ರಿ 7-30 ಗಂಟೆಗೆ ಕಂಠ ಪೂರ್ತಿ ಕುಡಿದು ಮನೆಗೆ ಬಂದ ಚಿಣ್ಣಪ್ಪ ಮತ್ತೆ ಕುಡಿಯಲು ಪತ್ನಿಯೊಂದಿಗೆ ಜಗಳ ವಾಡಿ ಹಣ ಕೇಳಿ ಕೊಡದಿದ್ದಾಗ ಹಲ್ಲೆ ನಡೆಸಿ ಕೊಲೆ ಮಾಡಿದನೆಂದು ಪೊನ್ನಂಪೇಟೆ ಪೊಲೀಸರು ಚಿಣ್ಣಪ್ಪನ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಿ ಆತನನ್ನು ನ್ಯಾಯಾಂಗ ಬಂಧನ ಕ್ಕೊಳಪಡಿಸಿ ನಂತರ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪ ಪಟ್ಟಿಯಲ್ಲಿ ನಮೂದಿಸಿದ 21 ಮಂದಿ ಸಾಕ್ಷಿದಾರರನ್ನು ವಿಚಾರಣೆ ನಡೆಸಿದರು. ಆರೋಪ ಪಟ್ಟಿಯಲ್ಲಿ ನಮೂದಿಸಿ ರುವಂತೆ ಆರೋಪಿ ಚಿಣ್ಣಪ್ಪನಿಗೆ ಐಪಿಸಿ 302ಕ್ಕೆ ಜೀವಾವಧಿ ಶಿಕ್ಷೆ, ದಂಡ, ದಂಡ ತೆರಲು ತಪ್ಪಿದರೆ 6 ತಿಂಗಳ ಸಜೆ, ಐ.ಪಿ.ಸಿ 201ಕ್ಕೆ 3 ವರ್ಷ ಸಜೆ ರೂ. 2000 ದಂಡ, ಐಪಿ.ಸಿ 323ಕ್ಕೆ 1 ವರ್ಷ ಸಜೆ ರೂ, 1000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸರಕಾರದ ಪರ ಅಭಿಯೋಜಕ ಮಹಾಂತಪ್ಪ ಅವರು ವಾದಿಸಿದರು.