ಶ್ರೀಮಂಗಲ, ಜ. 3: ತವರಿನಲ್ಲಿ ಸನ್ಮಾನ ಸಿಗುವಾಗ ಆಗುವ ಆತ್ಮತೃಪ್ತಿ ಬೇರೆಲ್ಲೂ ಸಿಗದು. ಕೊಡವ ಭಾಷೆ, ಸಾಹಿತ್ಯ, ಕಲೆ, ಜನಪದ, ಮಹಿಳಾ ಸಾಹಿತ್ಯ ಬೆಳವಣಿಗೆಯ ಮೇಲಿರುವ ಹಸಿವು ನನಗೆ ಸನ್ಮಾನಿಸುವಂತೆ ಮಾಡಿದೆ ಎನ್ನುವದಕ್ಕೆ ಹೆಮ್ಮೆ ಪಡುತ್ತೇನೆ ಎಂದು ಸನ್ಮಾನಿತೆ ಗೋಣಿಕೊಪ್ಪ ಕಾವೇರಿ ಕಾಲೇಜಿನ ಉಪನ್ಯಾಸಕಿ ಡಾ. ತೀತೀರ ರೇಖಾ ವಸಂತ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡವತಕ್ಕ್ ಎಳ್ತ್ಕಾರಡ ಕೂಟ, ಸಂಭ್ರಮ ಪೊಮ್ಮಕ್ಕಡಕ್ರೀಡೆ ಪಿಂಞ ಸಾಂಸ್ಕøತಿಕ ಸಂಸ್ಥೆ ಟಿ. ಶೆಟ್ಟಿಗೇರಿ ಹಾಗೂ ತಾವಳಗೇರಿ ಮೂಂದ್ನಾಡ್ ಕೊಡವ ಸಮಾಜದ ಸಂಯುಕ್ತ ಆಶ್ರಯದಲ್ಲಿ ಟಿ. ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ನಡೆದ ಪುಸ್ತಕ ಬಿಡುಗಡೆ ಹಾಗೂ ಮಂಡೀರ ಜಯಾ ಅಪ್ಪಣ್ಣ ದತ್ತಿನಿಧಿ ಪೈಪೋಟಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪ್ರತಿಯೊಬ್ಬರ ಸಾಧನೆಯ ಹಿಂದೆ ಪೋಷಕರ ಅದರಲ್ಲೂ ತಾಯಿಯ ಪಾತ್ರ ಬಹಳ ಮುಖ್ಯವಾಗಿದ್ದು ನನ್ನ ತಾಯಿಯ ಓದುವ ಅಭಿರುಚಿಯೇ ನನ್ನ ಸಾಹಿತ್ಯ ಸಾಧನೆಗೆ ಸ್ಫ್ಪೂರ್ತಿಯಾಯಿತು ಎಂದರು.
“ಕೊಡವ ಮಾಕಾವ್ಯ ಜಯಾ ಭಾರತ” ವಿಷಯದಲ್ಲಿ ಮಾತನಾಡಿದ ಅವರು, ಮಾಕಾವ್ಯ ಲೇಖಕಿ ಮಂಡೀರ ಜಯಾ ಅಪ್ಪಣ್ಣ ಅವರಿಗೆ ಭಗವದ್ಗೀತೆ, ಮಹಾಭಾರತದ ಬಗ್ಗೆ ಇದ್ದಜ್ಞಾನ, ಕೊಡಗಿನ ಪರಿಸರಕ್ಕೆ ಹಾಗೂ ಕೊಡಗಿನ ವ್ಯಕ್ತಿಗಳಿಗೆ ಹೊಂದಿಕೆಯಾಗುವ ರೀತಿಯಲ್ಲಿ ಜಯಾ ಭಾರತವನ್ನು ಬರೆದ ಅದ್ಬುತ ಶೈಲಿ, ವರ್ಣನೆ, ಅವರ ಭಾಷಾ ಪಾಂಡಿತ್ಯ, ವೃತ್ತಿನಿಷ್ಠೆ, ಸಾಹಿತ್ಯ ಪ್ರೇಮ ಹಾಗೂ ಕೊಡಗಿನ ಮಣ್ಣಿನ ಮತ್ತು ಕೊಡವ ಜನಾಂಗದ ಮೇಲಿದ್ದ ಅಪಾರ ಪ್ರೇಮದ ಬಗ್ಗೆ ವಿವರವಾಗಿ ತಿಳಿಸಿದರು.
ಈ ಸಂದರ್ಭ ಕೊಡವ ಜಯಾ ಭಾರತ ಮಹಾ ಕಾವ್ಯವನ್ನು ಉತ್ತಮ ಕಲಾವಿದರಿಂದ ಹಾಡಿಸಿ ಧ್ವನಿ ಸುರುಳಿ ಮಾಡುವಂತೆ ಕೊಡವತಕ್ಕ್ ಎಳ್ತ್ಕಾರಡ ಕೂಟಕ್ಕೆ ಸಲಹೆ ನೀಡುವದರೊಂದಿಗೆ ಇದಕ್ಕೆ ತಾನೂ ಸಂಪೂರ್ಣ ಸಹಕಾರ ನೀಡುವದಾಗಿ ಭರವಸೆ ನೀಡಿದರು.
ವೇದಿಕೆಯಲ್ಲಿ ಕೊಡವತಕ್ಕ್ ಎಳ್ತ್ಕಾರಡ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ, ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ, ಗೌರವಾಧ್ಯಕ್ಷೆ ತಡಿಯಂಗಡ ಸಬಿತಾ ರಮೇಶ್, ಕಾರ್ಯಾಧ್ಯಕ್ಷೆ ತಡಿಯಂಗಡ ಸೌಮ್ಯ ಕರುಂಬಯ್ಯ, ನಿರ್ದೇಶಕಿ ಬೊಳ್ಳಜೀರ ಸುಶೀಲ ಅಶೋಕ್, ತಾವಳಗೇರಿ ಮೂಂದ್ನಾಡ್ ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ, ಮ್ಯಾಕ್ ಆಗ್ರೋ ಸಂಸ್ಥೆಯ ಮಾಲೀಕ ಮಂಡೀರ ವಿವೇಕ್ ಚಂಗಪ್ಪ, ಲೇಖಕಿ ಅಜ್ಜಮಾಡ ಸಾವಿತ್ರಿ ಪೆಮ್ಮಯ್ಯ ಉಪಸ್ಥಿತರಿದ್ದರು. ಸಂಭ್ರಮ ಪೊಮ್ಮಕ್ಕಡ ಕ್ರೀಡೆ ಪಿಂಞ ಸಾಂಸ್ಕøತಿಕ ಸಂಸ್ಥೆಯ ಉಪಾಧ್ಯಕ್ಷೆ ಚಂಗುಲಂಡ ಅಶ್ವಿನಿ ಸತೀಶ್ ಸನ್ಮಾನಿತೆಯ ಪರಿಚಯ ಮಾಡಿದರು.