ಚೆಟ್ಟಳ್ಳಿ, ಜ. 3: ಬೆಳಿಗ್ಗೆ 9 ಗಂಟೆಗೆ ಕಾಡಾನೆಯಿಂದ ತುಳಿತಕ್ಕೆ ಒಳಗಾಗಿ ಅಬ್ಯಾಲದಲ್ಲಿ ವ್ಯಕ್ತಿ ಬಲಿಯಾದನೆಂಬ ವದಂತಿಯೊಂದು ಚೆಟ್ಟಳ್ಳಿಯ ಜನತೆಯನ್ನು ಬೆಚ್ಚಿ ಬೀಳಿಸಿತ್ತು. ಆದರೆ ಮತ್ತೆ ತಿಳಿದದ್ದು ಆನೆ ಧಾಳಿಯಿಂದ ಚೆಟ್ಟಳ್ಳಿಯ ಪ್ರೌಢಶಾಲಾ ಶಿಕ್ಷಕ ಮನೋಜ್ ಎಂಬವರು ಪಾರಾಗಿರುವ ವಿಚಾರ...!
ಸುದ್ದಿ ತಿಳಿದ ತಕ್ಷಣ ಮೀನುಕೊಲ್ಲಿ ಶಾಖೆಯ ಉಪ ವಲಯಾಧಿಕಾರಿ ಬಾನಂಡ ದೇವಿಪ್ರಸಾದ್, ಮಡಿಕೇರಿ ವಲಯಾಧಿಕಾರಿ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಒಂಟಿ ಆನೆಯೊಂದು ಅಬ್ಬಿಕೊಲ್ಲಿಯ ಪಕ್ಕದ ಕಾಫಿತೋಟದಿಂದ ಇಳಿಜಾರಿನಲ್ಲಿ ಜಾರಿಬಂದು ಕಾಫಿತೋಟಕ್ಕೆ ತೆರಳಿದ ಗುರುತು ಪತ್ತೆಯಾಗಿತ್ತು. ಈ ಸಂದರ್ಭ ಬೈಕ್ ಸವಾರನೋರ್ವ ಆನೆಯನ್ನು ಕಂಡು ಗಾಬರಿಗೊಂಡು ಓಡಿ ಪಾರಾದನೆಂದು ಮಾಹಿತಿ ಇದ್ದರೂ ಯಾರೆಂಬದು ತಿಳಿಯಲಿಲ್ಲ.
ಆಟೋ ಚಾಲಕನೋರ್ವ ವಿಷಯವನ್ನು ಪಟ್ಟಣದಲ್ಲಿ ಹೇಳಿದ್ದಾನೆ. ಕೂಡಲೆ ಸಾರ್ವಜನಿಕರು ತಂಡೋಪತಂಡವಾಗಿ ಸ್ಥಳಕ್ಕೆ ಜಮಾಯಿಸತೊಡಗಿದರೆ, ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್, ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ, ಚೆಟ್ಟಳ್ಳಿ ಹೆಡ್ಕಾನ್ಸ್ಟೇಬಲ್ ಪ್ರಕಾಶ್ ಸ್ಥಳಕ್ಕೆ ಬಂದು ಪರಿಶೀಲಿಸತೊಡಗಿದರು.
ಅರಣ್ಯ ಅಧಿಕಾರಿಗಳ ತಂಡ ಸಂಪೂರ್ಣ ಪರಿಶೀಲಿಸಿ ಯಾವದೇ ಅಹಿತಕರ ಘಟನೆ ನಡೆದಿಲ್ಲವೆಂದು ತಿಳಿಸಿದ ಮೇರೆಗೆ ಸಾರ್ವಜನಿಕರು ನಿಟ್ಟುಸಿರು ಬಿಟ್ಟರೆ, ಇತ್ತ ಚೆಟ್ಟಳ್ಳಿ ಶಾಲೆಯ ಹಿಂದಿ ಶಿಕ್ಷಕ ಮನೋಜ್ ಮಧ್ಯಾಹ್ನದವರೆಗೂ ಶಾಲೆಗೆ ಬಾರದಿರುವದು ಜೊತೆಗೆ ಫೋನಾಯಿಸಿದಾಗ ಸ್ವೀಕರಿಸುತ್ತಿರಲಿಲ್ಲ. ನಂತರದಲ್ಲಿ ಅಬ್ಯಾಲದಲ್ಲಿ ಅಪಘಾತವಾಗಿರುವ ಬಗ್ಗೆ ಶಾಲೆಗೆ ಮಾಹಿತಿ ದೊರೆತ ಹಿನ್ನೆಲೆ ಪೋಲಿಸ್ಠಾಣೆ ಹಾಗೂ ಆಸ್ಪತ್ರೆಯಲ್ಲಿ ವಿಚಾರಿಸಿದ್ದಾಗಲೂ ಯಾವದೇ ಮಾಹಿತಿ ಇಲ್ಲ.
ಎಂದಿನಂತೆ ಶಿಕ್ಷಕ ಶಾಲೆಗೆ ಸ್ಕೂಟರ್ನಲ್ಲಿ ಮಡಿಕೇರಿಯಿಂದ ಚೆಟ್ಟಳ್ಳಿಗೆ ಬರುತಿದ್ದರು. ಅಬ್ಯಾಲಕ್ಕೆ ತಲುಪುತಿದ್ದಂತೆ ಮೇಲಿಂದ ಜಾರಿಬಂದ ಒಂಟಿ ಕಾಡಾನೆಯನ್ನು ಕಂಡ ಮನೋಜ್ ಗಾಬರಿಯಿಂದ ಸ್ಕೂಟರನ್ನು ಬಿಟ್ಟು ಓಡತೊಡಗಿದ್ದಾರೆ. ಆನೆಯೂ ಹಿಂಬಾಲಿಸುವದನ್ನು ಕಂಡು ತಪ್ಪಿಸಿಕೊಳ್ಳಲು ಬಲಬದಿಯ ಇಳಿಜಾರಿನಲ್ಲಿ ಜಾರಿದ್ದಾರೆ. ಆನೆಯೂ ಅವರನ್ನೇ ಮನೋಜ್ರವರ ಹತ್ತಿರದಿಂದ ಬರೆಯ ಕೆಳಗೆ ಜಾರಿ ತೋಟದೊಳಗೆ ಹೋಗಿದೆ. ಆ ಸಮಯದಲ್ಲಿ ಆಟೋದಲ್ಲಿ ತೆರಳುತಿದ್ದವರು ಶಿಕ್ಷಕ ಮನೋಜ್ನನ್ನು ಕಂಡು ಮೇಲೆತ್ತಿ ವಿಚಾರಿಸಿದ್ದಾರೆ. ಗಾಬರಿಯಿಂದ ಓಡಿದ ರಬಸಕ್ಕೆ ಶಿಕ್ಷಕನ ಕಾಲಿನಿಂದ ಒಂದು ಶೂ ಕಾಣದಾಗಿ ಮತ್ತೊಂದನ್ನು ಎಸೆದು ಬರಿಕಾಲಿನಲ್ಲೇ ಮಡಿಕೇರಿಗೆ ತೆರಳಿದ್ದಾರೆ. ಗಿಡಗಂಟೆಗಳಿಂದ ಮೈ ಎಲ್ಲ ಪರಚಿಗಾಯವಾದ್ದರಿಂದ ಶಿಕ್ಷಕ ಮಡಿಕೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
-ಕರುಣ್ ಕಾಳಯ್ಯ