ಸೋಮವಾರಪೇಟೆ,ಜ.2: ಹಳೆ ದ್ವೇಷದ ಹಿನ್ನೆಲೆ ಈರ್ವರ ಮೇಲೆ ಗುಂಡಿನ ಧಾಳಿ ನಡೆಸಿರುವ ಘಟನೆ ನಿನ್ನೆ ರಾತ್ರಿ ಸಮೀಪದ ತಲ್ತರೆಶೆಟ್ಟಳ್ಳಿ ಗ್ರಾಮದಲ್ಲಿ ನಡೆದಿದ್ದು, ಸೋಮವಾರಪೇಟೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ತಲ್ತರೆಶೆಟ್ಟಳ್ಳಿ ಗ್ರಾಮದ ತಿಮ್ಮಯ್ಯ ಅವರ ಪುತ್ರ ದರ್ಶನ್ ಎಂಬವರ ಮೇಲೆ ಅದೇ ಗ್ರಾಮದ ಸಂದೀಪ್ ಮತ್ತು ಸಂತೋಷ್ ಅವರುಗಳು ಕೋವಿಯಿಂದ ಗುಂಡು ಹಾರಿಸಿದ್ದು, ಘಟನೆಯಿಂದ ದರ್ಶನ್ ಮತ್ತು ಪ್ರಜ್ವಲ್ ಅವರುಗಳಿಗೆ ಗಾಯಗಳಾಗಿವೆ. ಗಾಯಾಳುಗಳು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯ ವಿವರ: ತಲ್ತರೆಶೆಟ್ಟಳ್ಳಿ ಗ್ರಾಮದ ದರ್ಶನ್ ಅವರು ನಿನ್ನೆ ರಾತ್ರಿ ಮನೆಯಲ್ಲಿದ್ದ ಸಂದರ್ಭ ಅವರ ದೊಡ್ಡಪ್ಪನ ಮಗ ಪ್ರಜ್ವಲ್ ಮತ್ತು ಅದೇ ಗ್ರಾಮದ ಕೌಶಿಕ್ ಅವರುಗಳು ಬಂದು ಕಾರಿನಲ್ಲಿ ಶಾಲಾ ಮೈದಾನಕ್ಕೆ ಆಗಮಿಸಿ ದ್ದಾರೆ. ಈ ಸಂದರ್ಭ ಮೈದಾನದಲ್ಲಿ ಒಣಗಿಸಲು ಹಾಕಿದ್ದ ಕಾಫಿಯನ್ನು ನೋಡಿಕೊಂಡಿದ್ದ ಸಂದೀಪ್ ಮತ್ತು ಸಂತೋಷ್ ಅವರುಗಳು ಹಳೆ ದ್ವೇಷದಿಂದ ಪ್ರಜ್ವಲ್‍ನೊಂದಿಗೆ ಜಗಳ ತೆಗೆದಿದ್ದು, ನಮ್ಮೊಂದಿಗೆ ಗಲಾಟೆ ಮಾಡಲು ದರ್ಶನ್‍ನನ್ನು ಕರೆದುಕೊಂಡು ಬಂದಿದ್ದೀಯಾ? ಎಂದು ಪ್ರಶ್ನಿಸಿ ಕಾರಿನಲ್ಲಿದ್ದ ಕೋವಿ ತೆಗೆದು ಗುಂಡು ಹಾರಿಸಿದ್ದಾರೆ.

ಪರಿಣಾಮ ಕಾರಿನಲ್ಲಿ ಕುಳಿತಿದ್ದ ದರ್ಶನ್‍ನ ಎಡಭುಜ, ಎದೆಭಾಗಕ್ಕೆ ಪೆಟ್ಟಾಗಿದ್ದರೆ, ಪ್ರಜ್ವಲ್‍ನ ದೇಹಕ್ಕೂ ಗಾಯವಾಗಿದೆ. ತಕ್ಷಣ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಪಡೆದಿದ್ದು, ಈರ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ 307 ಐಪಿಸಿ ಅನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿ ಸಂದೀಪ್‍ನನ್ನು ಬಂಧಿಸಿದ್ದಾರೆ.

ಮತ್ತೊಂದು ದೂರು ದಾಖಲು: ಇದೇ ಘಟನೆಗೆ ಸಂಬಂಧಿಸಿದಂತೆ ತಲ್ತರೆಶೆಟ್ಟಳ್ಳಿ ಗ್ರಾಮದ ನಾರಾಯಣ ಎಂಬವರು ಪ್ರತ್ಯೇಕ ದೂರು ದಾಖಲಿಸಿದ್ದು, ಸಂದೀಪ್ ಅವರಿಗೆ ಸೇರಿದ ಕಾಫಿಯನ್ನು ಒಣಗಲು ಹಾಕಿದ್ದ ಶಾಲಾ ಮೈದಾನದಲ್ಲಿ ತಾನು ನಿಂತಿದ್ದ ಸಂದರ್ಭ, ಸಂದೀಪ್ ಅವರ ಮೇಲೆ ಪ್ರಜ್ವಲ್ ಹಲ್ಲೆಗೆ ಯತ್ನಿಸಿದ್ದು, ಇದನ್ನು ತಡೆಯಲು ಹೋದ ತನಗೆ ಕತ್ತಿಯಿಂದ ಹಲ್ಲೆ ಮಾಡಿದ್ದಾರೆ. ಬಲಗೈ ಮತ್ತು ಮಣಿಗಂಟಿಗೆ ಗಾಯಪಡಿಸಿ ದ್ದಾರೆ ಎಂದು ನೀಡಿದ ದೂರಿನ ಮೇಲೆ ಪ್ರಜ್ವಲ್ ವಿರುದ್ಧ ಐಪಿಸಿ 324 ಅನ್ವಯ ಮೊಕದ್ದಮೆ ದಾಖಲಿಸಲಾಗಿದೆ.

ಪೊಲೀಸ್ ಠಾಣಾಧಿಕಾರಿ ಶಿವಣ್ಣ ಸೇರಿದಂತೆ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.