ವೀರಾಜಪೇಟೆ, ಜ.2 : ನಾಲ್ಕೂವರೆ ದಶಕಗಳಿಂದಲೂ ಇಲ್ಲಿನ ಮಲೆತಿರಿಕೆ ಬೆಟ್ಟದ ಅಯ್ಯಪ್ಪ ಸೇವಾ ಸಮಿತಿಯಿಂದ ಆಚರಿಸಿಕೊಂಡು ಬರುತ್ತಿರುವ ಅಯ್ಯಪ್ಪನ ಉತ್ಸವವು ಡಿ.30ರಿಂದ ಆರಂಭಗೊಂಡು ನಿನ್ನೆ ದಿನ ರಾತ್ರಿ 12-30ಗಂಟೆಗೆ ಅಯ್ಯಪ್ಪ ದೇವಾಲಯದಲ್ಲಿ ಸುಬ್ರಹ್ಮಣ್ಯನಿಗೆ ವಿದ್ಯುಕ್ತವಾಗಿ ಪೂಜೆ ಸಲ್ಲಿಸುವದ ರೊಂದಿಗೆ ಉತ್ಸವ ತೆರೆ ಕಂಡಿತು.
ನಿನ್ನೆ ಬೆಳಿಗ್ಗೆ ಗಣಪತಿ ಹೋಮ, ಲಕ್ಷಾರ್ಚನೆ, ನಂತರ ಮಹಾಪೂಜಾ ಸೇವೆ ಅಪರಾಹ್ನ ಅನ್ನ ಸಂತರ್ಪಣೆ ಜರುಗಿತು. ರಾತ್ರಿ 7.30 ಗಂಟೆಗೆ ಅಯ್ಯಪ್ಪ ದೇವಾಲಯದಿಂದ ಪ್ರಾರಂಭಗೊಂಡ ಮೆರವಣಿಗೆ ಸಿದ್ದಾಪುರ ರಸ್ತೆ, ತೆಲುಗರಬೀದಿ, ಜೈನರಬೀದಿ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಮುಖ್ಯ ರಸ್ತೆಯ ಮಾರ್ಗ ವಾಗಿ ರಾತ್ರಿ 11ಗಂಟೆಗೆ ಮಲಬಾರ್ ರಸ್ತೆಯ ಮುತ್ತಪ್ಪ ದೇವಾಲಯ ವನ್ನು ತಲುಪಿ ಮುತ್ತಪ್ಪನಿಗೆ ಪೂಜೆ ಸಲ್ಲಿಸಿದ ನಂತರ ದೇವಾಲಯಕ್ಕೆ ಹಿಂತಿರುಗಿತು.
ಮೆರವಣಿಗೆಯಲ್ಲಿ ಅಯ್ಯಪ್ಪನ ಉತ್ಸವ ಮೂರ್ತಿ ದೀಪಾರತಿ, ಕೇರಳದ ಚಂಡೆ, ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದ ಶಿಲ್ಪಾ ಗೊಂಬೆ ಬಳಗದ ಮನರಂಜನೆ ತಂಡ, ಚಲನ ವಲನವಿರುವ ಅಯಪ್ಪನ ವಿಗ್ರಹ ಇತ್ತು. ಮುತ್ತಪ್ಪ ದೇವಾಲಯ ಸಮಿತಿ ಅಧ್ಯಕ್ಷ ಇ.ಸಿ.ಜೀವನ್ ಹಾಗೂ ಕಾರ್ಯದರ್ಶಿ ಟಿ.ಕೆ.ರಾಜನ್, ಅಯ್ಯಪ್ಪ ಸೇವಾ ಟ್ರಸ್ಟ್ ಸಮಿತಿಯ ಅಧ್ಯಕ್ಷ ಎಂ.ಕೆ.ಪೂವಯ್ಯ ಅವರ ನೇತೃತ್ವದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್.ಎಸ್. ಶ್ಯಾಮ್ಕುಮಾರ್, ಕಾರ್ಯದರ್ಶಿ ಡಿ.ಎಂ.ರಾಜ್ಕುಮಾರ್, ಪದಾಧಿಕಾರಿ ಗಳಾದ ಪಿ.ಕೆ.ಪ್ರದ್ಯುಮ್ನ, ಬಿ.ಕೆ.ಚಂದ್ರು, ಎ.ಆರ್.ಯೋಗಾನಂದ ರಾವ್, ಮುಕ್ಕಾಟೀರ ಪೊನ್ನಪ್ಪ ಇದ್ದರು.
ಒಡೆಯನಪುರ: ಸಮೀಪದ ಗೋಪಾಲಪುರ ಶ್ರೀ ಬನಶಂಕರಿ ಅಮ್ಮನವರ ದೇವಾಲಯದಲ್ಲಿ ಮಂಗಳವಾರ ಬನದ ಹುಣ್ಣಿಮೆ ಮಹೋತ್ಸವ ಕಾರ್ಯಕ್ರಮ ನೆರವೇರಿತು.
ಶ್ರೀ ಬನಶಂಕರಿ ಅಮ್ಮನವರ ದೇವಾಲಯ ಸಮಿತಿ ಮತ್ತು ದೇವಾಂಗ ಸಂಘದ ವತಿಯಿಂದ ನಡೆದ ಬನದ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ದೇವಿಗೆ ಫಲ ಪಂಚಾಮೃತ ಅಭಿಷೇಕ, ದುರ್ಗಾಸೂಕ್ತ, ದೇವಿಸೂಕ್ತ ಅಭಿಷೇಕ, ದೇವಿಗೆ ವಸ್ತ್ರಾಲಂಕಾರ ಹಾಗೂ ಪುಷ್ಪಾಲಂಕಾರ ಸೇವೆಯನ್ನು ನೆರವೇರಿಸಲಾಯಿತು.
ಭಕ್ತಾಧಿಗಳಿಗೆ ತೀರ್ಥಪ್ರಸಾದ ವಿನಿಯೋಗದೊಂದಿಗೆ ದೇವಾಲಯ ದಲ್ಲಿ ಬನದ ಮಹೋತ್ಸವ ಕಾರ್ಯವು ಸಂಪನ್ನಗೊಂಡಿತು. ಶ್ರೀ ಬನಶಂಕರಿ ಅಮ್ಮನವರ ದೇವಾಲಯದ ಅರ್ಚಕ ಎನ್.ಕೆ.ಮೋಹನ್ ನೇತೃತ್ವದಲ್ಲಿ ಅರ್ಚಕರಾದ ನಾಗೇಶ್ಭಟ್, ಕೆಂಚಮನಹೊಸÀಕೋಟೆ ಕೆಂಚಾಂಬಿಕ ದೇವಾಲಯದ ಅರ್ಚಕರಾದ ರವಿ, ಚಂದ್ರಶೇಖರ್ ಮತ್ತು ಬಾಗೇರಿ ಶ್ರೀ ರಾಮಮಂದಿರದ ದೇವಾಲಯದ ಶಂಕರ್ನಾರಾಯಣ್ ಭಟ್ ಪೂಜಾ ವಿದಿವಿಧಾನವನ್ನು ನೆರವೇರಿಸಿದರು. ದೇವಾಂಗ ಸಂಘದ ವತಿಯಿಂದ ಅನ್ನದಾನವನ್ನು ಏರ್ಪಡಿಸಲಾಯಿತು. ಈ ಸಂದರ್ಭದಲ್ಲಿ ದೇವಾಲಯ ಸಮಿತಿ ಮತ್ತು ದೇವಾಂಗ ಸಂಘದ ಪದಾಧಿಕಾರಿಗಳು ಹಾಜರಿದ್ದರು.
ಮೂರ್ನಾಡು: ಶ್ರೀ ಅಯ್ಯಪ್ಪ ಸ್ವಾಮಿ ವಾರ್ಷಿಕ ಪೂಜೋತ್ಸವ ಪ್ರಯುಕ್ತ ದೇವರ ಉತ್ಸವ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ತಾ. 4ರಂದು ನಡೆಯಲಿದೆ.
ಇಲ್ಲಿನ ಶ್ರೀ ಅಯ್ಯಪ್ಪ ದೇವಾಲಯದಲ್ಲಿ ಶ್ರೀ ಅಯ್ಯಪ್ಪ ಸೇವಾ ಸಮಿತಿಯಿಂದ ಬೆಳಿಗ್ಗೆಯಿಂದ ವಿವಿಧ ಪೂಜಾ ಕಾರ್ಯಕ್ರಮ ನಡೆಯಲಿದ್ದು, ಮಹಾಪೂಜೆ ಬಳಿಕ ಮಧ್ಯಾಹ್ನ ಅನ್ನದಾನ ನಡೆಯಲಿದೆ. ಸಂಜೆ ಶ್ರೀ ಅಯ್ಯಪ್ಪ ಯುವಕ ಮಂಡಳಿಯಿಂದ ಅಯ್ಯಪ್ಪ ಮೂರ್ತಿ ಮೆರವಣಿಗೆ, ಸೀತಾದೇವಿ ಸಾಂಸ್ಕøತಿಕ ತಂಡ, ಪುಲ್ಪಳ್ಳಿ ಇವರಿಂದ ಶಿಂಗಾರಿ ಮೇಳ, ಕೃಷ್ಣವೇಲು ನೃತ್ಯ ಕಲಾತಂಡದಿಂದ ಕೀಲು ಕುದುರೆ ನಮಿಲು ಬ್ಯಾಂಡ್, ಹುಲಿವೇಷ ನೃತ್ಯ ಹಾಗೂ ಭಕ್ತಾದಿಗಳಿಗೆ ಅನ್ನದಾನ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಶಾಲನಗರ: ಕುಶಾಲನಗರ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ 24ನೇ ಪಂಪ ದೀಪೋತ್ಸವ ಕಾರ್ಯಕ್ರಮ ಭಕ್ತಿಭಾವದಿಂದ ಜರುಗಿತು. ದೀಪೋತ್ಸವ ಅಂಗವಾಗಿ ದೇವಾಲಯದ ಅರ್ಚಕರುಗಳಾದ ಕೃಷ್ಣಮೂರ್ತಿ ಭಟ್, ವಿಷ್ಣುಮೂರ್ತಿ ಹೊಳ್ಳ, ಸೋಮಶೇಖರ್ ಭಟ್ ನೇತೃತ್ವದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.
ಅಯ್ಯಪ್ಪ ವೃತಾಧಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪಂಪಾವಿಳಕನ್ನು ಕಾವೇರಿ ನದಿಗೆ ಮೆರವಣಿಗೆ ಮೂಲಕ ಕೊಂಡೊಯ್ದು ವಿಸರ್ಜಿಸಿದರು.
ಈ ಸಂದರ್ಭ ಕಾರ್ಯಕ್ರಮ ಆಯೋಜಕ ವಿ.ಎಸ್. ಆನಂದ ಕುಮಾರ್, ರಾಕಿ, ಹೆಚ್.ಎಂ.ಚಂದ್ರು, ರವಿ, ರಾಜೇಶ್, ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷರಾದ ಗಣಪತಿ, ಶಿವಾನಂದನ್, ಸೋಮಶೇಖರ್, ಸುಬ್ಬಯ್ಯ ಮತ್ತಿತರರು ಇದ್ದರು. ದೀಪೋತ್ಸವ ಅಂಗವಾಗಿ ಝೇಂಕಾರ್ ಆರ್ಕೆಸ್ಟ್ರಾ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು.