ಚೆಟ್ಟಳ್ಳಿ, ಜ. 2: ಬಿದ್ದಾಟಂಡ ಹಾಕಿ ಉತ್ಸವಕ್ಕೆ ಸರಕಾರದಿಂದ ಬರಬೇಕಿರುವ ಅನುದಾನವನ್ನು ಶೀಘ್ರವೇ ಬಿಡುಗಡೆಗೂಳಿಸಿ ಕೊಡಬೇಕೆಂದು ಕೊಡಗು ಜಿಲ್ಲೆಯ ಶಾಸಕಿ ವೀಣಾ ಅಚ್ಚಯ್ಯ ಹಾಗೂ ಬ್ರಿಜೇಶ್ ಕಾಳಪ್ಪ ಅವರ ಸಮ್ಮುಖದಲ್ಲಿ ನಿಯೋಗವೊಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಬಳಿ ತೆರಳಿ ಮನವಿ ಮಾಡಿತ್ತು.
ಮನವಿಗೆ ಸ್ಪಂದಿಸಿದ ಮುಖ್ಯ ಮಂತ್ರಿಗಳು ಕೂಡಲೇ ತಮ್ಮ ಸರಕಾರದ ಮುಖ್ಯ ಕಾರ್ಯದರ್ಶಿ ಯವರಾದ ಎಲ್. ಎ. ಅಥಿಕ್ ಅವರನ್ನು ಸಂಪರ್ಕಿಸಿ, ಇನ್ನು ಬಾಕಿಯಿರುವ ಬಿದ್ದಾಟಂಡ ಹಾಕಿ ಉತ್ಸವದ ಮೂವತ್ತೈದು ಲಕ್ಷದಷ್ಟು ಮತ್ತು ಶಾಂತೆಯಂಡ ಹಾಕಿಯ ಹತ್ತು ಲಕ್ಷದಷ್ಟು ಹಣವನ್ನು ಕೂಡಲೇ ಬಿಡುಗಡೆಗೊಳಿಸಲು ಆದೇಶಿಸಿದರು.
ಸರಕಾರದ ಮುಖ್ಯ ಕಾರ್ಯದರ್ಶಿಯವರು ಯುವಜನ ಕ್ರೀಡಾ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ರಜನೀಶ್ ಗೋಯೆಲ್ ಅವರನ್ನು ಸಂಪರ್ಕಿಸಿ ಬಾಕಿಯಿರುವ ಹಣವನ್ನು ತಡ ಮಾಡದೆ ಬಿಡುಗಡೆಗೂಳಿಸಲು ಸೂಚಿಸಿದರು.
ನಿಯೋಗದಲ್ಲಿ ಸುಮಾವಸಂತ್, ಬಿದ್ದಾಟಂಡ ತಮ್ಮಯ್ಯ, ಬಿದ್ದಾಟಂಡ ಹರ್ಷಿತ್ ಸೋಮಯ್ಯ, ನಂದಿನೆರವಂಡ ಮಧು ಮತ್ತಿತರರು ಹಾಜರಿದ್ದರು.