ಸೋಮವಾರಪೇಟೆ, ಜ. 2: ಆಸ್ತಿ ವ್ಯಾಜ್ಯದ ಸಮಸ್ಯೆ ಹಾಗೂ ಸಾಲಬಾಧೆಯಿಂದ ಬೇಸತ್ತ ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಬೇಳೂರು ಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬೇಳೂರು ಬಸವನಹಳ್ಳಿ ಗ್ರಾಮ ನಿವಾಸಿ ರಾಮಶಂಕರ (57) ನೇಣಿಗೆ ಶರಣಾದವರು. ಮಂಗಳವಾರ ಬೆಳಿಗ್ಗೆ 5.30 ಗಂಟೆಗೆ ಎದ್ದು ಮನೆ ಮುಂಭಾಗದ ಪಾನವಾಳ ಮರಕ್ಕೆ ನೇಣು ಬಿಗಿದುಕೊಂಡಿದ್ದಾರೆ.
ಆಸ್ತಿಯ ವ್ಯಾಜ್ಯ ನ್ಯಾಯಾಲಯದಲ್ಲಿದ್ದು, ತೀರ್ಪು ಮಠದ ಪರವಾಗಿ ಬರಬಹುದು ಎಂದು ತನ್ನ ಪತಿ ಆತಂಕಗೊಂಡಿದ್ದರು. ಅಲ್ಲದೆ ಕೈಸಾಲ ಮಾಡಿ ಕೊಂಡಿದ್ದು, ಸಾಲಬಾಧೆ ಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪತ್ನಿ ಕೋಮಲ ಪಟ್ಟಣದ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತರಿಗೆ ಇಬ್ಬರು ಮಕ್ಕಳಿದ್ದು, ಮಗಳು ಮೊನಿಷಾ 9ನೇ ತರಗತಿ ಹಾಗೂ ಮಗ ಪವನ್ 4ನೇ ತರಗತಿಯಲ್ಲಿ ಓದುತ್ತಿದ್ದಾರೆ. ಮೃತರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನಡೆಯಿತು.