ಮಡಿಕೇರಿ, ಜ. 2: ಹಲವಷ್ಟು ಸಮಸ್ಯೆಗಳಿದ್ದರೂ, ಒಂದು ರೀತಿಯಲ್ಲಿ ಚೆನ್ನಾಗಿದ್ದ ಮಡಿಕೇರಿ ನಗರ ಅವೈಜ್ಞಾನಿಕವಾಗಿ ನಡೆಸಲಾಗುತ್ತಿರುವ ಯು.ಜಿ.ಡಿ. (ಒಳಚರಂಡಿ) ಕಾಮಗಾರಿಯಿಂದಾಗಿ ಅಲ್ಲೋಲಕಲ್ಲೋಲವಾಗಿದೆ. ಈ ಬಗ್ಗೆ ಜನತೆ ಬಾಯಿ ಬಾಯಿ ಬಡಿದು ಕೊಂಡರೂ ಕಾಮಗಾರಿಯಂತೂ ಮುಂದುವರಿಯುತ್ತಿದೆ. ಕಾಮಗಾರಿ ನಡೆಸುವವರಂತೂ ಕಣ್ಣಿದ್ದೂ ಕುರುಡರಂತೆ ತಮ್ಮ ಕೆಲಸದ ಬಗ್ಗೆ ಮಾತ್ರ ಗಮನ ಹರಿಸುತ್ತಿದ್ದಾರೆಯೇ ಹೊರತು ಅಗೆದ ರಸ್ತೆ ತೆಗೆದ ಗುಂಡಿಗಳನ್ನು ತಕ್ಷಣ ಮುಚ್ಚವಲ್ಲಿ ಗಮನವೇ ಹರಿಸುತ್ತಿಲ್ಲ ನಗರದ ಕೊಡವ ಸಮಾಜ ಕೆಳಭಾಗದ (ಓಂಕಾರೇಶ್ವರ ದೇವಾಲಯದ ಹಿಂಭಾಗ) ಕಾಂಕ್ರೀಟ್ ರಸ್ತೆಯನ್ನು ಅಗೆಯಲಾಗಿದ್ದು, ಸಿಮೆಂಟ್ ಚೂರುಗಳನ್ನು ಹಾಗೆಯೇ ಬಿಡಲಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‍ಓ) ಕಚೇರಿ ಎದುರಿನ ರಸ್ತೆಯಲ್ಲಿ ತೆಗದ ಗುಂಡಿ ಹಾಗೇ ಬಿದ್ದಿದೆ. ಈ ಸ್ಥಳದಲ್ಲಿ ನೀರಿನ ಪೈಪ್ ಒಡೆದು ಹೋಗಿದ್ದು, ನೀರು ಸೋರಿಕೆಯಿಂದಾಗಿ ಇದೇನು ಮಳೆಗಾಲವೇ ಎಂಬ ಸನ್ನಿವೇಶ ಇಲ್ಲಿ ನಿರ್ಮಾಣವಾಗಿದೆ. ನಗರದ ನಾಗರಿಕರೊಬ್ಬರು ಅವ್ಯವಸ್ಥೆಯನ್ನು ನೋಡಲಾರದೆ ‘ಶಕ್ತಿ’ಗೆ ವ್ಯಾಟ್ಸಾಪ್ ಮೂಲಕ ಚಿತ್ರವನ್ನು ಕಳುಹಿಸಿದ್ದು, ಹೇಳೋರು, ಕೇಳೋರು ನಗರಸಭೆಯಲ್ಲಿ ಯಾರೂ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.