ಕುಶಾಲನಗರ, ಜ. 2: ಕೋತಿಗಳ ಹಾವಳಿಯಿಂದ ರಕ್ಷಣೆಗೆ ಕ್ರಮಕೈಗೊಳ್ಳಬೇಕೆಂದು ಕುಶಾಲನಗರ ಪಟ್ಟಣದ ಬಡಾವಣೆಯೊಂದರ ನಿವಾಸಿಗಳು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿರುವ ವಿಶಿಷ್ಟ ಪ್ರಕರಣವೊಂದು ಬೆಳಕಿಗೆ ಬಂದಿದೆ.
ದಿನಬೆಳಗಾದರೆ ಸಾಕು ಹತ್ತಾರು ವಾನರ ಕುಟುಂಬಗಳು ಲಗ್ಗೆ ಹಾಕುವದರೊಂದಿಗೆ ಇಡೀ ಪರಿಸರವನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವ ವಿಲಕ್ಷಣ ಪ್ರಕರಣಗಳು ಕುಶಾಲನಗರದ ದಂಡಿನಪೇಟೆ ಬಡಾವಣೆಯಲ್ಲಿ ನಡೆಯುತ್ತಿದೆ.
ಕಳೆದ ಕೆಲವು ವರ್ಷಗಳಿಂದ ಇಲ್ಲಿಗೆ ಕೋತಿಗಳು ಬಂದು ಹೋಗುತ್ತಿದ್ದವು. ಆದರೆ ಕಳೆದ 1 ವರ್ಷದಿಂದ ವಲಸೆ ಬಂದ ಕೋತಿಗಳು ಇಲ್ಲೇ ಠಿಕಾಣಿ ಹೂಡಿರುವದು ಈ ಎಲ್ಲಾ ಅವಾಂತರಕ್ಕೆ ಕಾರಣ. ನದಿ ತಟದಲ್ಲಿರುವ ಹಣ್ಣುಗಳು, ಕಾಯಿಗಳು ಸುತ್ತಮುತ್ತ ತೋಟಗಳ ಎಲ್ಲವೂ ಇದೀಗ ಕೋತಿಗಳ ಸ್ವತ್ತಾಗಿದೆ.
ಈ ಬಗ್ಗೆ ಹಲವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯ ಮಹಿಳೆ ಕುಸುಮ. ಬೆಳಗಾದರೆ ಸಾಕು ಮನೆಯ ಕಿಟಕಿ ತೆರೆಯುವಂತಿಲ್ಲ. ಮನೆಯಿಂದ ಹೊರಗೆ ಮಕ್ಕಳು ಓಡಾಡುವಂತಿಲ್ಲ. ಮನೆಯ ತಾರಸಿ ಮೇಲಿಂದ ತೆಂಗಿನ ಕಾಯಿಗಳನ್ನು ಎಸೆಯುವುದು ಇಂತಹ ಘಟನೆಗಳಿಂದ ಅಪಾಯಗಳು ಆಗಾಗ್ಯೆ ಸೃಷ್ಟಿಯಾಗಿವೆ.
ಪ್ರಾರಂಭದಲ್ಲಿ ಐದಾರು ಕೋತಿಗಳು ಕಂಡುಬಂದವು. ಇದೀಗ ಮಂಗಗಳ ಕುಟುಂಬ ವೃದ್ಧಿಯಾಗಿದ್ದು 100 ಕ್ಕೂ ಅಧಿಕ ವಾನರ ಸದಸ್ಯರು ಇಡೀ ಬಡಾವಣೆಯನ್ನೇ ತಮ್ಮ ವಶಕ್ಕೆ ತೆಗೆದುಕೊಂಡಂತೆ ಭಾಸವಾಗುತ್ತಿದೆ ಎನ್ನುತ್ತಾರೆ ಬಡಾವಣೆ ನಿವಾಸಿಗಳು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ, ಅರಣ್ಯಾಧಿಕಾರಿಗಳಿಗೆ ದೂರು ನೀಡಲಾಗಿದೆ. ಆದರೆ ಇಲ್ಲಿ ತನಕ ಯಾವದೇ ಕ್ರಮ ತೆಗೆದುಕೊಂಡಿಲ್ಲ ಎನ್ನುತ್ತಾರೆ ನೊಂದ ನಿವಾಸಿಗಳು.
ಕೂಡಲೆ ಮಂಗಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸಿ ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸ ಬೇಕೆಂದು ಶಕ್ತಿ ಮೂಲಕ ಅಧಿಕಾರಿ ಗಳಿಗೆ ಮನವಿ ಮಾಡಿಕೊಂಡಿದ್ದಾರೆ.
-ಚಂದ್ರಮೋಹನ್