ಸೋಮವಾರಪೇಟೆ,ಜ.2: ಕಳೆದ ಡಿಸೆಂಬರ್ 23ರಂದು ಬೆಳ್ಳಂಬೆಳಿಗ್ಗೆ ಇಗ್ಗೋಡ್ಲು ಗ್ರಾಮದಲ್ಲಿ ನಡೆದ ಜೀಪು ಚಾಲಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಐಬಿ ಪೊಲೀಸರು ಮೂವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿರುವ ಬಗ್ಗೆ ತಿಳಿದುಬಂದಿದೆ.ಮಡಿಕೇರಿಯಿಂದ ಮಾಂದಲಪಟ್ಟಿ ಪ್ರವಾಸಿ ತಾಣಕ್ಕೆ ಜೀಪಿನಲ್ಲಿ ಪ್ರವಾಸಿಗರನ್ನು ಕರೆದೊಯ್ಯುವ ಕೆಲಸ ಮಾಡುತ್ತಿದ್ದ ಮೂಲತಃ ಮುಕ್ಕೋಡ್ಲು ಗ್ರಾಮದ ನಿವಾಸಿ, ಮಾದಾಪುರ ಸರ್ಕಾರಿ ಶಾಲೆಯ ಬಳಿಯಲ್ಲಿ ಬಾಡಿಗೆ ಮನೆ ಪಡೆದು ವಾಸವಿದ್ದ ಶಾಂತಿ ಅವರ ಪತಿ ಕಾಳಚಂಡ ರಂಜನ್ ಪೂವಯ್ಯ(47) ಅವರನ್ನು 2017ರ ಡಿಸೆಂಬರ್ 23ರಂದು ಮುಂಜಾನೆ 5 ಗಂಟೆ ಸುಮಾರಿಗೆ ಅಪರಿಚಿತರು ಗುಂಡು ಹಾರಿಸಿ ಹತ್ಯೆಗೈದಿದ್ದರು.
ಪ್ರಾರಂಭದಲ್ಲಿ ಕಗ್ಗಂಟಾಗಿದ್ದ ಪ್ರಕರಣವನ್ನು ಕೇಲವೇ ದಿನಗಳಲ್ಲಿ ಭೇದಿಸಿರುವ ಡಿಸಿಐಬಿ ತಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರಂಜನ್ ಪೂವಯ್ಯ ಅವರ ಪತ್ನಿ ಸೇರಿದಂತೆ ವೀರಾಜಪೇಟೆಯ ಈರ್ವರು ಯುವಕರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿರುವ ಬಗ್ಗೆ ವಿಶ್ವಾಸನೀಯ ಮೂಲಗಳಿಂದ ತಿಳಿದುಬಂದಿದೆ.
ವೀರಾಜಪೇಟೆಯ ಚೆಂಬೆ ಬೆಳ್ಳೂರಿನ ಈರ್ವರು ಆರೋಪಿಗಳು ತಾ. 23ರಂದು ಮುಂಜಾನೆ ಬೈಕ್‍ನಲ್ಲಿ ಬಂದು ರಂಜನ್ ಪೂವಯ್ಯ ಅವರ ಮೇಲೆ ಗುಂಡಿನ
(ಮೊದಲ ಪುಟದಿಂದ) ಧಾಳಿ ನಡೆಸಿ ಪರಾರಿಯಾಗಿದ್ದರು ಎನ್ನಲಾಗಿದ್ದು, ಇಂದು ಬೆಳಿಗ್ಗೆ 10.30ಕ್ಕೆ ಆರೋಪಿ ಗಳೊಂದಿಗೆ ಇಗ್ಗೋಡ್ಲು ಗ್ರಾಮಕ್ಕೆ ಆಗಮಿಸಿದ ಡಿಸಿಐಬಿ ಅಧಿಕಾರಿಗಳ ತಂಡ, ಸ್ಥಳ ಮಹಜರು ನಡೆಸಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ರಂಜನ್ ಪೂವಯ್ಯ ಅವರ ತಿಥಿ ನಿನ್ನೆ ದಿನ ಮುಕ್ಕೋಡ್ಲು ಗ್ರಾಮದ ಸ್ವಗೃಹದಲ್ಲಿ ಏರ್ಪಟ್ಟಿದ್ದು, ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪತ್ನಿ ಶಾಂತಿ ಅವರು ಮಧ್ಯಾಹ್ನ ಆತುರಾತುರವಾಗಿ ಹೊರಡಲು ಅನುವಾಗುತ್ತಿದ್ದಂತೆ ಡಿಸಿಐಬಿ ಪೊಲೀಸರು ಮುಕ್ಕೋಡ್ಲಿಗೆ ಆಗಮಿಸಿ ನಿನ್ನೆಯೇ ವಶಕ್ಕೆ ಪಡೆದಿದ್ದರು ಎನ್ನಲಾಗಿದೆ.
ಇಂದು ರಂಜನ್ ಪೂವಯ್ಯ ಅವರ ಪತ್ನಿ ಶಾಂತಿ ಸೇರಿದಂತೆ ಚೆಂಬೆಬೆಳ್ಳೂರಿನ ಈರ್ವರು ಆರೋಪಿಗಳೊಂದಿಗೆ ಆಗಮಿಸಿದ ಡಿಸಿಐಬಿ ಇನ್ಸ್‍ಪೆಕ್ಟರ್ ಮಹೇಶ್ ಮತ್ತು ಸಿಬ್ಬಂದಿಗಳು, ಇಗ್ಗೋಡ್ಲಿನ ಬಾಡಿಗೆ ಮನೆಯಲ್ಲಿ ಪರಿಶೀಲನೆ ನಡೆಸಿದರು. ಕೃತ್ಯಕ್ಕೆ ಬಳಸಲಾಗಿದ್ದ ಕೋವಿಯನ್ನು ವಶಕ್ಕೆ ಪಡೆದಿರುವ ತಂಡ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸುತ್ತಿದೆ.