ಮೂರ್ನಾಡು, ಜ. 1 : ಎನ್‍ಎಸ್‍ಎಸ್ ಶಿಬಿರಗಳು ಸರ್ವತೋಮುಖ ಅಭಿವೃದ್ಧಿಗೆ ಅಡಿಪಾಯವಾಗಿದ್ದು, ವಿದ್ಯಾರ್ಥಿಗಳ ಅರ್ಥಪೂರ್ಣ ಬದುಕಿಗೆ ಉತ್ತಮ ಮಾರ್ಗ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಡಾ. ಮೇಚಿರ ಸುಭಾಶ್ ನಾಣಯ್ಯ ಹೇಳಿದರು.

ಕಾಕೋಟುಪರಂಬು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮೂರ್ನಾಡು ವಿದ್ಯಾಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿಶೇಷ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣಕಾರರಾಗಿ ಮಾತನಾಡಿ, ವಿದ್ಯಾರ್ಥಿಗಳು ಸಕರಾತ್ಮಕ, ಗುಣಾತ್ಮಕ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಮೂರ್ನಾಡು ವಿದ್ಯಾಸಂಸ್ಥೆ ಕಾರ್ಯದರ್ಶಿ ಚೌರೀರ ಎಂ. ಪೆಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಾಕೋಟುಪರಂಬು ನಿವೃತ್ತ ಶಿಕ್ಷಕ ಅಮ್ಮಂಡಿರ ಮುತ್ತಮ್ಮ, ಕಾಕೋಟುಪರಂಬು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರಾದ ಕುಸುಮಾವತಿ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಪಿ.ಎ. ಭಾಗೀರಥಿ, ಶಿಬಿರಾಧಿಕಾರಿ ನೆರಪಂಡ ಹರ್ಷ ಮಂದಣ್ಣ, ಸಹ ಶಿಬಿರಾಧಿಕಾರಿ ಹರೀಶ್ ಕಿಗ್ಗಾಲು, ನಾಟೋಳಂಡ ಸಿ. ನವೀನ್, ಕಂಬೀರಂಡ ಕೆ. ಬೋಪಣ್ಣ, ಉಪನ್ಯಾಸಕರಾದ ಸೋಮಯ್ಯ, ದರ್ಶನ್, ವಿಲ್ಮ, ಅರ್ಪಿತ, ಶಾರದ, ಕಲ್ಪನಾ ಇತರರರು ಹಾಜರಿದ್ದರು. ಶಿಬಿರಾರ್ಥಿಗಳು ಶಿಬಿರದ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮಕ್ಕೆ ಮೊದಲು ಶಾಲಾ ಆವರಣದಲ್ಲಿ ಶಿಬಿರದ ವತಿಯಿಂದ ಗಿಡಗಳನ್ನು ನೆಡಲಾಯಿತು.