ಸೋಮವಾರಪೇಟೆ ,ಜ. 1: ಅಮೇರಿಕಾದಲ್ಲಿ ಖ್ಯಾತ ಕಿಡ್ನಿ ರೋಗ ತಪಾಸಣೆ-ಚಿಕಿತ್ಸಾ ತಜ್ಞರಾಗಿರುವ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಪುತ್ರ, ಎಂ.ಎ. ಕಾರ್ಯಪ್ಪ ಅವರು ತಾ. 2ರಂದು (ಇಂದು) ಸೋಮವಾರಪೇಟೆಯಲ್ಲಿ ಹಾಗೂ ತಾ. 3ರಂದು(ನಾಳೆ) ಮಡಿಕೇರಿಯಲ್ಲಿ ಕಿಡ್ನಿ ರೋಗಿಗಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಿದ್ದಾರೆ.ಮಂಡೇಪಂಡ ಎ. ಕಾರ್ಯಪ್ಪ ಅವರು ಅಮೇರಿಕಾದಲ್ಲಿ ಎಂಬಿಬಿಎಸ್, ಎಂ.ಡಿ., ಡಿ.ಎಂ., ಸೂಪರ್ ಸ್ಪೆಷಾಲಿಟಿ ಇನ್ ನೆಪ್ರೋಲಜಿ ವ್ಯಾಸಂಗ ಮಾಡಿ, ಅಲ್ಲಿನ ಸೌತ್ ವೆಸ್ಟ್ ಕಿಡ್ನಿ ಇನ್ಸ್‍ಟಿಟ್ಯೂಷನ್‍ನಲ್ಲಿ ತಜ್ಞವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಸ್ವದೇಶಕ್ಕೆ ಆಗಮಿಸುವ ಸಂದರ್ಭ ಸ್ಥಳೀಯ ಆಸ್ಪತ್ರೆಗಳಿಗೆ ಭೇಟಿ ನೀಡಿ ಕಿಡ್ನಿ ಸಂಬಂಧಿತ ರೋಗಿಗಳಿಗೆ ನೀಡುವ ಚಿಕಿತ್ಸೆಗಳ ಬಗ್ಗೆ ವೈದ್ಯರಿಂದ ಮಾಹಿತಿ ಪಡೆಯುತ್ತಿದ್ದಾರೆ.
ಕಳೆದ ವರ್ಷ ಮಡಿಕೇರಿಯಲ್ಲಿ ಕಿಡ್ನಿ ರೋಗಿಗಳಿಗೆ ಉಚಿತ ತಪಾಸಣೆ ಶಿಬಿರ ಆಯೋಜಿಸಿ ಹಲವಷ್ಟು ರೋಗಿಗಳಿಗೆ ನೆರವಾಗಿರುವ ಕಾರ್ಯಪ್ಪ ಅವರು ಈ ಬಾರಿ ಸೋಮವಾರಪೇಟೆ ಮತ್ತು ಮಡಿಕೇರಿಯಲ್ಲಿ ತಪಾಸಣಾ ಶಿಬಿರ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ.
ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ತಾ. 2ರಂದು ಬೆಳಿಗ್ಗೆ 10 ಗಂಟೆಯಿಂದ ಕಿಡ್ನಿ ಸಂಬಂಧಿತ ರೋಗಿಗಳ ತಪಾಸಣೆ ನಡೆಸಲಿದ್ದಾರೆ. ತಾ. 3ರಂದು ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನದವರೆಗೆ ತಪಾಸಣೆ ನಡೆಸಿ, ಮಧ್ಯಾಹ್ನ ನಂತರ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಲಿದ್ದಾರೆ.
ಕಿಡ್ನಿ ಸಂಬಂಧಿತ ರೋಗಗಳಿಂದ ಬಳಲುತ್ತಿರುವವರು, ಈಗಾಗಲೇ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ತಮ್ಮ ಹಿಂದಿನ ಎಲ್ಲಾ ಚಿಕಿತ್ಸಾ ವರದಿಗಳು, ಲ್ಯಾಬ್ ಶೀಟ್‍ಗಳೊಂದಿಗೆ ಶಿಬಿರಕ್ಕೆ ಆಗಮಿಸಬೇಕು. ರೋಗಿಯ ತಪಾಸಣೆ, ಚಿಕಿತ್ಸಾ ಪದ್ಧತಿಯ ಪರಿಶೀಲನೆ, ಹೆಚ್ಚಿನ ಚಿಕಿತ್ಸೆಗೆ ಸಲಹೆ ಸೂಚನೆಗಳನ್ನು ಶಿಬಿರದಲ್ಲಿ ನೀಡಲಾಗುವದು. ಸ್ಥಳೀಯ ಔಷಧಿಗಳ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದು, ರೋಗಿಗಳಿಗೆ ಶಿಫಾರಸ್ಸು ಮಾಡಲಾಗುವದು ಎಂದು ಕಾರ್ಯಪ್ಪ ಅವರು ಮಾಹಿತಿ ನೀಡಿದರು.
ಉಚಿತ ಕಿಡ್ನಿ ತಪಾಸಣಾ ಶಿಬಿರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ
ಮೊ. 9945987621 ಸಂಖ್ಯೆಯನ್ನು ಸಂಪರ್ಕಿಸಬಹುದು.