ಮಡಿಕೇರಿ, ಜ. 1: ಫಿನಾಯಿಲ್ ಕುಡಿದು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ಖೈದಿಯೋರ್ವ ಆಸ್ಪತ್ರೆಯಿಂದ ಪರಾರಿಯಾಗಿರುವ ಘಟನೆ ನಡೆದಿದೆ.

ಇತ್ತೀಚೆಗೆ ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟು ಮಡಿಕೇರಿ ಜೈಲು ಸೇರಿದ್ದ ಕುಶಾಲನಗರ ಬೈಚನಹಳ್ಳಿಯ ಗಣೇಶ್ (26) ಎಂಬ ಆರೋಪಿ ಜೈಲಿನಲ್ಲಿ ಫಿನಾಯಿಲ್ ಕುಡಿದ್ದು, ಅತೀವ ವಾಂತಿಯಿಂದಾಗಿ ಎರಡು ದಿನಗಳ ಹಿಂದೆ ಅಸ್ವಸ್ಥಗೊಂಡಿದ್ದ ಆತನನ್ನು ಜಿಲ್ಲಾಸ್ಪತ್ರೆಗೆ ಕರೆ ತರಲಾಗಿತ್ತು. ಆತನನ್ನು ಪರೀಕ್ಷಿಸಿದ್ದ ವೈದ್ಯರು ಆಸ್ಪತ್ರೆಯ ಸಾಮಾನ್ಯ ಪುರುಷರ ವಿಭಾಗದಲ್ಲಿ ಪರಿಶೀಲನೆಗಾಗಿ ದಾಖಲು ಮಾಡಿಕೊಂಡಿದ್ದರು. ಇಂದು ಶೌಚಾಲಯಕ್ಕೆಂದು ಪೊಲೀಸರು ಆತನನ್ನು ಕರೆದೊಯ್ದಿದ್ದ ಸಂದರ್ಭ ಶೌಚಾಲಯದ ಒಳ ಭಾಗದ ಕಿಟಕಿ ಮೂಲಕ ಹಾರಿ ಪರಾರಿಯಾಗಿದ್ದಾನೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.