ಗೋಣಿಕೊಪ್ಪಲು, ಜ. 1: ಪೊನ್ನಂಪೇಟೆ ತಾಲೂಕು ಪುನರಚನೆಗೆ ಆಗ್ರಹಿಸಿ 62 ನೇ ದಿನದ ಪ್ರತಿಭಟನೆ ಯಲ್ಲಿ ಭಯೋತ್ಪಾದಕ ಹಾಗೂ ಶತ್ರು ಸೇನೆಯಿಂದ ಹೊಸ ವರ್ಷ ದಿನದಂದೇ ಹುತಾತ್ಮರಾದ ಸೈನಿಕರಿಗೆ ಮೌನಾಚರಣೆ ಮಾಡುವದರ ಮೂಲಕ ಸಂತಾಪ ಸೂಚಿಸಲಾಯಿತು.

ಜಿ.ಪಂ ಮಾಜಿ ಸದಸ್ಯ ಮೂಕಳೇರ ಕುಶಾಲಪ್ಪ ಮಾತನಾಡಿ, ಸ್ವಾತಂತ್ರ್ಯ ಪೂರ್ವದ ಕ್‍ಗ್ಗಟ್ಟ್‍ನಾಡ್ ತಾಲೂಕು ಪುನರಚನೆಗೆ ಆಗ್ರಹಿಸಿ ಆದರೆ ಇದುವರೆಗೆ ನಾವುಗಳು ಶಾಂತಿಯುತವಾಗಿ ಪೊನ್ನಂಪೇಟೆ ಸುತ್ತಮುತ್ತಲಿನ 21 ಗ್ರಾ.ಪಂಗಳ ಸಾರ್ವಜನಿಕರ ಸಹಕಾರದಲ್ಲಿ ಪ್ರತಿಭಟಿಸಿದ್ದೇವೆ. ಆದರೂ ಸರ್ಕಾರ ಸೂಕ್ತವಾಗಿ ಸ್ಪಂದಿಸಿಲ್ಲ. ತಾ. 2 ರಂದು ಮುಖ್ಯಮಂತ್ರಿಗಳು ಸಚಿವ ಸಂಪುಟದ ಸಭೆಯನ್ನು ಕರೆದಿದ್ದು, ಈ ಸಂದರ್ಭ ಪೊನ್ನಂಪೇಟೆ ತಾಲ್ಲೂಕು ರಚನೆಯ ಬಗ್ಗೆ ವಿಷಯ ಪ್ರಸ್ತಾಪವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಂಎಲ್‍ಸಿ ವೀಣಾ ಅಚ್ಚಯ್ಯ ಈ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯುವ ಭರವಸೆ ನೀಡಿರುವದು ನಮ್ಮ ವಿಶ್ವಾಸ ಹೆಚ್ಚಿಸಿದೆ ಎಂದರು. ತಾಲೂಕು ಪುನರಚನಾ ಸಮಿತಿ ಹಾಗೂ ಹಿರಿಯ ನಾಗರಿಕ ವೇದಿಕೆ ಮತ್ತು ಸಾರ್ವಜನಿಕರು ಪಾಲ್ಗೊಂಡರು.

ಮಾಜಿ ಯೋಧ ಚೆಟ್ರುಮಾಡ ಕಾಶಿ ತಮ್ಮಯ್ಯ, ಚೆಟ್ರುಮಾಡ ಶಂಕುರು ಚಂಗಪ್ಪ, ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಪಿ.ಕೆ.ಪೂಣಚ್ಚ, ಕಿರುಗೂರು ಗ್ರಾ.ಪಂ ಸದಸ್ಯ ಗಿರೀಶ್, ಪೊನ್ನಂಪೇಟೆ ಗ್ರಾ.ಪಂ ಸದಸ್ಯ ಮೂಕಳೇರ ಲಕ್ಷ್ಮಣ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ವಲಯ ಕಾಂಗ್ರೇಸ್ ಅಧ್ಯಕ್ಷ ಮತ್ರಂಡ ದಿಲ್ಲು, ಪ್ರಮುಖ ಆಲೀರ ಎರ್ಮು ಹಾಜಿ ಪಾಲ್ಗೊಂಡಿದ್ದರು.