ಕುಶಾಲನಗರ, ಜ. 1 : ಪ್ರವಾಸಿಗರಿಂದ ಜಿಲ್ಲೆಯ ಪ್ರವಾಸಿ ಕೇಂದ್ರಗಳು ಹಾಗೂ ಕಾವೇರಿ ನದಿ ಕಲುಷಿತಗೊಳ್ಳುತ್ತಿರುವ ಬಗ್ಗೆ ವರದಿಗಳು ಪ್ರಕಟಗೊಳ್ಳುತ್ತಿರುವ ಹಿನ್ನಲೆಯಲ್ಲಿ ಸಂಬಂಧಿಸಿದ ಎಲ್ಲಾ ಪಂಚಾಯತ್ ಅಧಿಕಾರಿಗಳಿಗೆ ಸೂಕ್ತ ಕ್ರಮಕೈಗೊಳ್ಳಲು ಆದೇಶ ನೀಡಲಾಗಿದೆ ಎಂದು ಕೊಡಗು ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ತಿಳಿಸಿದ್ದಾರೆ.
ಕಳೆದ ಕೆಲವು ಸಮಯದಿಂದ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರು ಅದರಲ್ಲಿಯೂ ಶೈಕ್ಷಣಿಕ ಪ್ರವಾಸ ಕೈಗೊಳ್ಳುವ ಶಾಲಾ ವಿದ್ಯಾರ್ಥಿಗಳ ತಂಡ ನದಿ ತಟಗಳಲ್ಲಿ, ಪ್ರವಾಸಿ ತಾಣಗಳ ಆವರಣದಲ್ಲಿ ಅಡುಗೆ ಮಾಡುವದರೊಂದಿಗೆ ತ್ಯಾಜ್ಯಗಳನ್ನು ನದಿಗೆ ಎಸೆಯುವ ಪ್ರಕರಣಗಳು ಕಂಡುಬಂದಿದೆ.
ಕುಶಾಲನಗರ ಗಡಿಭಾಗದಿಂದ ತಲಕಾವೇರಿ ತನಕ ರಸ್ತೆ ಬದಿ ಮತ್ತು ನದಿ ತಟಗಳು ಪ್ರವಾಸಿಗರು ಎಸೆಯುವ ತ್ಯಾಜ್ಯಗಳಿಂದ ಬಹುತೇಕ ಅಶುಚಿತ್ವ ಸೃಷ್ಟಿಯಾಗುತ್ತಿರುವ ದೃಶ್ಯ ಕಂಡುಬಂದಿದೆ. ಆಯಕಟ್ಟಿನ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲು ಮತ್ತು ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಸತೀಶ್ ಕುಮಾರ್ ಶಕ್ತಿಗೆ ತಿಳಿಸಿದ್ದಾರೆ.