ಗೋಣಿಕೊಪ್ಪಲು, ಜ. 1: ನೂತನ ವರ್ಷಾಚರಣೆಗಾಗಿ ಕೊಡಗಿನ ಮೇಲೆ ಪ್ರವಾಸಿಗರ ಒತ್ತಡ ಅಧಿಕಗೊಳ್ಳುತ್ತಿದ್ದು ಈ ಬಾರಿಯೂ ನಿರೀಕ್ಷೆಗಿಂತಲೂ ಅಧಿಕ ಪ್ರವಾಸಿಗರು ಮೈಸೂರು, ಬೆಂಗಳೂರು ಒಳಗೊಂಡಂತೆ ದೇಶ ವಿದೇಶಗಳಿಂದ ಆಗಮಿಸಿದ್ದು ದಕ್ಷಿಣ ಕೊಡಗಿನಲ್ಲಿಯೂ ಅಧಿಕ ಪ್ರವಾಸಿಗರು ವರ್ಷದ ಕೊನೆಯ ದಿನ ಕೊನೆಯ ರಾತ್ರಿ ನೂತನ ವರ್ಷವನ್ನು ಸಂಭ್ರಮದಿಂದ ಆಚರಿಸಿದ ವರದಿಯಾಗಿದೆ.

ದಕ್ಷಿಣ ಕೊಡಗಿನ ಪ್ರಮುಖ ತೀರ್ಥಕ್ಷೇತ್ರ ಲಕ್ಷ್ಮಣ ತೀರ್ಥ ನದಿಯ ಉಗಮಸ್ಥಾನ ಇರ್ಪು ಜಲಪಾತ ವೀಕ್ಷಣೆಗೂ ಸಾವಿರಾರು ಸಂಖ್ಯೆಯಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ಭೇಟಿ ನೀಡಿದ್ದಾರೆ.

ಬಾಡಗರಕೇರಿ ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿಯೂ ಅಧಿಕ ಪ್ರವಾಸಿಗರು ಮೃತ್ಯುಂಜಯ ಹೋಮ ಇತ್ಯಾದಿ ಪೂಜೆ ಸಲ್ಲಿಸಲು ಭೇಟಿ ನೀಡುತ್ತಿದ್ದಾರೆ. ಸುಮಾರು 800ಕ್ಕೂ ಅಧಿಕ ಭಕ್ತಾದಿಗಳು ಇಂದು ಪೂಜೆ ಸಲ್ಲಿಸಿದ ವರದಿಯಾಗಿದೆ.

ನಾಗರಹೊಳೆ ಸಫಾರಿ ವಿಚಾರವಾಗಿಯೂ ಸಾವಿರಾರು ಪ್ರವಾಸಿಗರು ನಿರಾಶೆ ಅನುಭವಿಸಿದ ವರದಿಯಾಗಿದೆ. ಇಂದು ಸುಮಾರು 500ಕ್ಕೂ ಅಧಿಕ ಪ್ರವಾಸಿಗರಿಗೆ ಸಫಾರಿ ಭಾಗ್ಯ ದೊರೆಯದೆ ನಿರಾಶೆಯಿಂದ ವಾಪಾಸ್ಸಾದ ಘಟನೆ ಜರುಗಿದ್ದು, ಕಳೆದ ಒಂದು ವಾರದಿಂದ 7 ಸಾವಿರಕ್ಕೂ ಅಧಿಕ ಪ್ರವಾಸಿಗರು ಸಫಾರಿ ಭಾಗ್ಯವಿಲ್ಲದೆ ವಾಪಾಸಾಗಿದ್ದಾರೆ.

ನಾಗರಹೊಳೆ ಸಫಾರಿಗೆ ಈ ಹಿಂದೆ ಒಟ್ಟು ನಾಲ್ಕು ಮಿನಿಬಸ್‍ಗಳನ್ನು ಮೀಸಲಾಗಿಡಲಾಗಿತ್ತು. ಆದರೆ, ಸುಪ್ರೀಂ ಕೋರ್ಟ್ ಆದೇಶದನ್ವಯ ಕೇವಲ ಒಂದು ಬಸ್ ಮಾತ್ರ ಇದೀಗ ಸಫಾರಿಗಾಗಿ ಮೀಸಲಿಟ್ಟಿರುವದಾಗಿ ಅಲ್ಲಿನ ನೂತನ ವಲಯಾರಣ್ಯಾಧಿಕಾರಿ ಅರವಿಂದ್ ಶಕ್ತಿಗೆ ತಿಳಿಸಿದ್ದು, ಪ್ರವಾಸಿಗರನ್ನು ನಿಯಂತ್ರಿಸುವದೇ ಕಷ್ಟವಾಗಿದೆ ಎಂದು ಹೇಳುತ್ತಾರೆ.

ನಾಗರಹೊಳೆ ಸಫಾರಿ ಅಪರಾಹ್ನ 2.30 ಗಂಟೆಗೆ ಆರಂಭಗೊಳ್ಳಲಿದ್ದು, ನಂತರ 4 ಗಂಟೆಗೆ ಮತ್ತೊಂದು ಸಫಾರಿಗೆ ಬಸ್ ಹೊರಡುತ್ತದೆ. ಇದರಿಂದಾಗಿ ಕೇವಲ ದಿನದಿತ್ಯ ಎರಡು ಬಸ್ ಜನ ಮಾತ್ರಾ ನಾಗರಹೊಳೆ ವೀಕ್ಷಣೆ ಮಾಡುವಂತಾಗಿದೆ. ಇಲ್ಲಿನ ಉಳಿದ ಮೂರು ಬಸ್‍ಗಳನ್ನು ಅಂತರ ಸಂತೆ ಹಾಗೂ ವೀರನಹೊಸಳ್ಳಿ ಮೂಲಕ ಸಫಾರಿಗೆ ವರ್ಗಾಯಿಸಲಾಗಿದೆ.

ನಾಗರಹೊಳೆಯಲ್ಲಿ ಸುಮಾರು 1.30 ಗಂಟೆ ಸಫಾರಿಗೆ ಹಿರಿಯರಿಗೆ ರೂ.350 ಮತ್ತು ಮಕ್ಕಳಿಗೆ ರೂ.150 ರಂತೆ ಶುಲ್ಕ ವಿಧಿಸಲಾಗುತ್ತಿದೆ. ವೀರನಹೊಸಳ್ಳಿಯಲ್ಲಿ ಮೂರು ಸಫಾರಿ ಬಸ್ ನಿಯೋಜಿಸಲಾಗಿದ್ದು ಓರ್ವರಿಗೆ ರೂ.550 ರಂತೆ ಶುಲ್ಕ ವಿಧಿಸಲಾಗುತ್ತಿದ್ದು ಸುಮಾರು 3 ಗಂಟೆ ಅವಧಿಯ ಸಫಾರಿ ಒಳಗೊಂಡಿರುತ್ತದೆ.

ನಿರಂತರ ನಾಗರಹೊಳೆಯತ್ತ ಮುಖ ಮಾಡುತ್ತಿದ್ದ ಪ್ರವಾಸಿಗರು ಇದೀಗ ಸಫಾರಿ ಟಿಕೆಟ್ ಸಿಗದೆ ಬೇಸರದಿಂದ ಇಲಾಖೆಗೆ ಹಿಡಿಶಾಪ ಹಾಕಿ ಹಿಂತಿರುಗುವ ದೃಶ್ಯ ಸಾಮಾನ್ಯವಾಗಿದೆ.

ಈ ಹಿಂದೆ ನಾಗರಹೊಳೆಯಲ್ಲಿ ಖಾಸಗಿ ವಾಹನಗಳ ಸಂಖ್ಯೆ ಮಿತಿಮೀರುತ್ತಿದ್ದು, ವನ್ಯಪ್ರಾಣಿಗಳಿಗೂ ಪ್ರವಾಸಿಗರಿಂದ ಕಿರಿಕಿರಿ ತಪ್ಪಿಸಲು ಇಂತಹ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅರವಿಂದ್ ಹೇಳುತ್ತಾರೆ. ಇದೀಗ ಬೇಸಿಗೆಯಾಗಿದ್ದು ವನ್ಯಪ್ರಾಣಿಗಳು ಕಾಣಸಿಗುವದೂ ವಿರಳ ಎನ್ನಲಾಗುತ್ತಿದೆ. ಆದರೆ, ಕುಟ್ಟ ಮಾನಂದವಾಡಿ ಮಾರ್ಗದಲ್ಲಿ ವಯನಾಡ್ (ನೀಲಗಿರಿ ವನ್ಯಧಾಮ) ಸಫಾರಿ ಇದ್ದು, ಇಲ್ಲಿ ನಿರಾಶೆಗೊಂಡ ಪ್ರವಾಸಿಗರು ಅಧಿಕವಾಗಿ ಅತ್ತ ತೆರಳುತ್ತಿದ್ದಾರೆ. ಇದರಿಂದಾಗಿ ಕರ್ನಾಟಕ ಅರಣ್ಯ ಇಲಾಖೆ ಆದಾಯವು ಕುಂಠಿತಗೊಳ್ಳುತ್ತಿದೆ.

ದಕ್ಷಿಣ ಕೊಡಗಿನಾದ್ಯಂತ ಇಂದು ಪ್ರವಾಸಿಗರ ವಾಹನವೇ ಅಧಿಕವಾಗಿ ಕಂಡು ಬಂದವು. ಹೋಮ್ ಸ್ಟೇ, ರೆಸಾರ್ಟ್‍ಗಳು ವಾರದ ಮುನ್ನವೇ ಕಾಯ್ದಿಸಿರಿಸಿದ ಹಿನ್ನೆಲೆ ಹಲವು ಪ್ರವಾಸಿಗರು ಗೋಣಿಕೊಪ್ಪಲು, ವೀರಾಜಪೇಟೆ, ಸಿದ್ದಾಪುರ ಇತ್ಯಾದಿ ಕಡೆಗಳಲ್ಲಿ ಲಾಡ್ಜ್‍ಗೆ ಮೊರೆ ಹೋಗಿದ್ದು ಕಂಡು ಬಂತು. ಒಟ್ಟಿನಲ್ಲಿ ಶನಿವಾರ ಮತ್ತು ಭಾನುವಾರ ಕೊಡಗಿನ ಎಲ್ಲೆಡೆ ಪ್ರವಾಸಿಗರ ಮೋಜು ಮಸ್ತಿ ಕಂಡು ಬಂತು.

ವರದಿ: ಟಿ.ಎಲ್.ಶ್ರೀನಿವಾಸ್