ಸೋಮವಾರಪೇಟೆ, ಜ. 1: ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಅನನ್ಯವಾಗಿದ್ದು, ತಮ್ಮ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕೆಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್ ಅಭಿಪ್ರಾಯಿಸಿದರು.

ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಿಕ್ಷಕರು ವಿದ್ಯಾರ್ಥಿಗಳ ಬೌದ್ಧಿಕ ಕ್ಷಮತೆಯನ್ನು ಅರಿತುಕೊಂಡು ಪಾಠ ಪ್ರವಚನ ನೀಡಬೇಕು. ಜೀವನದ ಯಶಸ್ಸು ಸಾಧಿಸುವ ಶಿಕ್ಷಣ ನೀಡಬೇಕು. ಕೇವಲ ಪಾಠಕ್ಕಷ್ಟೇ ಸೀಮಿತವಾಗದೆ ಅವರೊಳಗೆ ಅಡಗಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಅಭಿಮನ್ಯು ಕುಮಾರ್ ಕಿವಿಮಾತು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಗುರಿ ಸಾಧನೆಗೆ ಅವಿರತ ಪರಿಶ್ರಮ ಅಗತ್ಯ. ಸರ್ಕಾರಿ ಶಾಲೆಗಳೂ ಸಹ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಪೋಷಕರ ಕಾಳಜಿಯ ಕೊರತೆಯಿಂದ ಕೆಲ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಿಂದೆ ಉಳಿಯುತ್ತಿದ್ದಾರೆ ಎಂದರು.

ತಾ.ಪಂ. ಸದಸ್ಯೆ ಹೆಚ್.ಎನ್. ತಂಗಮ್ಮ ಮಾತನಾಡಿ, ವಿದ್ಯಾರ್ಥಿಗಳು ಪಾಠದೊಂದಿಗೆ ಪಠ್ಯೇತರ ಚಟುವಟಿಕೆಯತ್ತಲೂ ಗಮನಹರಿಸಬೇಕು. ಕ್ರೀಡಾ ಕ್ಷೇತ್ರದಲ್ಲಿ ಹಲವಷ್ಟು ಆಯ್ಕೆಗಳಿದ್ದು, ಪ್ರತಿಭೆಗೆ ತಕ್ಕ ಪ್ರೋತ್ಸಾಹ ಲಭಿಸಿದರೆ ಉತ್ತಮ ಭವಿಷ್ಯ ಕಟ್ಟಿಕೊಳ್ಳಬಹುದು ಎಂದು ಅಭಿಪ್ರಾಯಿಸಿದರು.

ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರುಗಳಾದ ಜೆ.ಸಿ. ಶೇಖರ್, ಗಿರೀಶ್, ನಳಿನಿ ಗಣೇಶ್, ಪ್ರಬಾರ ಪ್ರಾಂಶುಪಾಲ ಚಂದ್ರಶೇಖರ್, ಪ್ರೌಢಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಶೇಖರ್, ದಾನಿಗಳಾದ ಸುಲೋಚನಾ ಪ್ರಸನ್ನ ಉಪಸ್ಥಿತರಿದ್ದರು. ಉಪನ್ಯಾಸಕಿ ತಿಲೋತ್ತಮೆ ಕಾರ್ಯಕ್ರಮ ನಿರ್ವಹಿಸಿದರೆ, ವಿದ್ಯಾರ್ಥಿನಿ ಅರ್ಚನ ಪ್ರಾರ್ಥಿಸಿದರು. ಉಪನ್ಯಾಸಕಿ ಲತಾ ಅವರು ಕಾಲೇಜಿನ ವಾರ್ಷಿಕ ವರದಿ, ಶಿಕ್ಷಕಿ ಧನ್ಯ ಅವರು ಪ್ರೌಢಶಾಲೆಯ ವಾರ್ಷಿಕ ವರದಿ ವಾಚಿಸಿದರು.

ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರಿದ ಮತ್ತು ಕ್ರೀಡಾಕೂಟಗಳಲ್ಲಿ ಜಯಗಳಿಸಿದ ಕಾಲೇಜಿನ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.