ಕುಶಾಲನಗರ, ಜ. 1: ಕುಶಾಲನಗರವನ್ನು ಕೇಂದ್ರವಾಗಿಸಿ ಕೊಂಡು ನೂತನ ತಾಲೂಕು ರಚನೆಗೆ ಆಗ್ರಹಿಸಿ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಸೋಮವಾರದಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದರು.

ಸಮಿತಿ ಆಶ್ರಯದಲ್ಲಿ ನಡೆದ ಹಲವು ಮಜಲುಗಳ ಹೋರಾಟಕ್ಕೆ ಸರಕಾರದಿಂದ ಯಾವದೇ ರೀತಿಯ ಸೂಕ್ತ ಸ್ಪಂದನ ದೊರಕದ ಹಿನ್ನೆಲೆಯಲ್ಲಿ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಅಮರಣಾಂತ ಉಪವಾಸ ಕೈಗೊಂಡಿರುವದಾಗಿ ಮಾಹಿತಿ ನೀಡಿದರು. ಇವರೊಂದಿಗೆ ಉದ್ಯಮಿ ಕೆ.ಎಸ್.ರಾಜಶೇಖರ್ ಪಾಲ್ಗೊಂಡರು.

ಧರಣಿಯಲ್ಲಿ ಸಮಿತಿ ಪ್ರಮುಖರಾದ ಎಂ.ವಿ. ನಾರಾಯಣ, ಎನ್.ಕೆ. ಮೋಹನ್‍ಕುಮಾರ್, ಅಬ್ದುಲ್ ಖಾದರ್, ವಿ.ಎನ್. ವಸಂತಕುಮಾರ್, ಗಣೇಶ್, ವರದ, ರವೀಂದ್ರ ರೈ, ಚಂದ್ರಶೇಖರ್ ಮತ್ತಿತರರು ಇದ್ದರು.

ಅಹಿಂದ ಬೆಂಬಲ: ಉಪವಾಸ ಸತ್ಯಾಗ್ರಹ ಸಂದರ್ಭ ಕುಶಾಲನಗರ ಹೋಬಳಿ ಅಹಿಂದ ಒಕ್ಕೂಟದ ಪ್ರಮುಖರು ಹಾಗೂ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ಒಕ್ಕೂಟದ ಜಿಲ್ಲಾ ಸ್ಥಾಪಕ ಅಧ್ಯಕ್ಷ ಟಿ.ಪಿ. ರಮೇಶ್, ಹೋಬಳಿ ಅಧ್ಯಕ್ಷ ಎಂ.ಕೆ. ಹಮೀದ್ ನೇತೃತ್ವದಲ್ಲಿ ಸದಸ್ಯರು ಪಾಲ್ಗೊಂಡರು.