ಕುಶಾಲನಗರ, ಜ. 1: ನಿರಂತರ ಕಾರ್ಯಚಟುವಟಿಕೆಗಳ ಮೂಲಕ ಸಂಘ ಸಂಸ್ಥೆಗಳ ಅಭಿವೃದ್ಧಿ ಸಾಧ್ಯ ಎಂದು ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದ ಸ್ಥಾಪಕ ಅಧ್ಯಕ್ಷರಾದ ಜಿ. ರಾಜೇಂದ್ರ ಹೇಳಿದರು.
ಕುಶಾಲನಗರದಲ್ಲಿ ನೂತನವಾಗಿ ಆರಂಭಿಸಲಾದ ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದ ಶಾಖಾ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇವಲ ಅಧಿಕಾರಕ್ಕಾಗಿ ನಾಮಕಾವಸ್ಥೆಗೆ ಸಂಘಗಳು ಸ್ಥಾಪನೆಗೊಂಡಲ್ಲಿ ಅಂತಹ ಸಂಘಗಳ ಉನ್ನತಿ ಅಸಾಧ್ಯ ಎಂದರು.
ಯಾವದೇ ರೀತಿಯ ಆರೋಪಗಳಿಗೆ ಕಿವಿಗೊಡದೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ ಎಂದು ಅವರು ತಿಳಿಸಿದರು.
ಸಂಘದ ಮಾಜಿ ಅಧ್ಯಕ್ಷರಾದ ಬಿ.ಆರ್.ನಾಗೇಂದ್ರಪ್ರಸಾದ್ ಕ್ಯಾಶ್ ಕೌಂಟರ್ ಉದ್ಘಾಟಿಸಿದರು. ಸಂಘದ ನಿರ್ದೇಶಕರಾದ ಬಾಬುಚಂದ್ರ ಉಳ್ಳಾಗಡ್ಡಿ ಸಭಾಂಗಣ ಉದ್ಘಾಟಿಸಿದರು, ಎಂ.ಇ.ಅಬ್ದುಲ್ ರಹೀಂ ಭದ್ರತಾ ಕೊಠಡಿ ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭ ಸಂಘದ ಅಧ್ಯಕ್ಷ ಕೆ.ಎಂ. ಗಣೇಶ್, ಉಪಾಧ್ಯಕ್ಷ ಬಿ.ರಾಮಕೃಷ್ಣಯ್ಯ ಸೇರಿದಂತೆ, ನಿರ್ದೇಶಕರುಗಳಾದ ಬಿ. ಅಮೃತ್‍ರಾಜ್, ಬಿ. ಜನಾರ್ಧನ ಪ್ರಭು, ಎಸ್.ಐ. ಮುನೀರ್ ಅಹಮ್ಮದ್, ಸವಿತಾ ರೈ ಸೇರಿದಂತೆ ನಿರ್ದೇಶಕರುಗಳು ಇದ್ದರು.