ಗೋಣಿಕೊಪ್ಪ ವರದಿ, ಜ. 1 : ಜಿಲ್ಲೆಯಲ್ಲಿ ನಡೆಯುತ್ತಿರುವ ನಿರಂತರ ಗೋಹತ್ಯೆ ಹಾಗೂ ಕಳ್ಳತನ ತಡೆಯುವ ನಿಟ್ಟಿನಲ್ಲಿ ಜನವರಿ 4 ರಂದು ಸಿದ್ದಾಪುರದಲ್ಲಿ ಗೋರಕ್ಷಕ ಯಾತ್ರೆ ನಡೆಯಲಿದೆ ಎಂದು ಜಿಲ್ಲಾ ಹವ್ಯಕ ಸಮಿತಿ ಸದಸ್ಯ ರಾಮಚಂದ್ರ ಭಟ್ ತಿಳಿಸಿದ್ದಾರೆ.
ಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಮಧ್ಯಾಹ್ನ 3 ಗಂಟೆಗೆ ನೆಲ್ಯಹುದಿಕೇರಿಯಿಂದ ಸಿದ್ದಾಪುರದ ವರೆಗೆ ಬೃಹತ್ ಗೋರಕ್ಷಕ ಯಾತ್ರೆ ನಡೆಯಲಿದೆ. ನೆಲ್ಯಹುದಿಕೇರಿಯ ಮುತ್ತಪ್ಪ ದೇವಸ್ಥಾನದಿಂದ ಆರಂಭಗೊಳ್ಳವ ಯಾತ್ರೆಯಲ್ಲಿ ಅಗ್ರರಥ , ಅಭಯಹಸ್ತಾಕ್ಷರ ರಥ ಹಾಗೂ ಸಂತರನ್ನು ಒಳಗೊಂಡ ಮೂರು ರಥಗಳು ಸಿದ್ದಾಪುರದ ಅಯ್ಯಪ್ಪ ದೇವಸ್ಥಾನದವರೆಗೆ ಸಾಗಲಿದೆ ಎಂದರು.
ಕಾವೇರಿ ನಾಡಿನಲ್ಲಿ ಗೋವಧೆ ಸಂಪೂರ್ಣವಾಗಿ ನಿಷೇಧವಿದ್ದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ. ಇದರಿಂದಾಗಿ ಇತ್ತೀಚೆಗಷ್ಟೆ ನೆಲ್ಯಹುದಿಕೇರಿಯಲ್ಲಿ ನಡೆದ ಗೋಕಳ್ಳತನ, ಅದರಿಂದಾದ ಪರಿಣಾಮದ ಕುರಿತು ಅದೇ ಸ್ಥಳದಲ್ಲಿ ಗೋವರ್ಧನೆ ಬಗ್ಗೆ ಬೆಳಕು ಚೆಲ್ಲಲು ರಾಮಚಂದ್ರಾಪುರ ಮಠದ ಶ್ರೀ ರಾಘವೇಂದ್ರ ಶ್ರೀಗಳು ಖುದ್ದಾಗಿ ಗೋರಕ್ಷಕ ಯಾತ್ರೆಯಲ್ಲಿ ಪಾಲ್ಗೊಂಡು ಶ್ರೀರಾಮಮಂದಿರದಲ್ಲಿ ಆಶೀರ್ವಚನ ನೀಡಲಿದ್ದಾರೆ ಎಂದು ಹೇಳಿದರು.
ಯಾತ್ರೆಯಲ್ಲಿ ಅರಮೇರಿ ಕಳಂಚೇರಿ ಮಠದ ಸ್ವಾಮೀಜಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ಬೋಧಸ್ವರೂಪ ನಂದಾಜಿ, ಬೆಟ್ಟದಪುರ ಕನ್ನಡ ಮಠದ ಚೆನ್ನಕೇಶದೇಶಿಕೇಂದ್ರ ಸ್ವಾಮೀಜಿ, ಉತ್ತರ ಕಾಶಿ ಕಪಿಲಾಶ್ರಮದ ರಾಮ ಚಂಧ್ರ ಸ್ವಾಮೀಜಿ ಭಾಗವಹಿಸಲಿದ್ದಾರೆ.
ವಿಹೆಚ್‍ಪಿ, ಹಿಂದೂ ಜಾಗರಣಾ ವೇದಿಕೆ, ಬಜರಂಗದಳ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬೆಂಬಲದಿಂದ ಹೆಚ್ಚು ಹಿಂದೂ ಕಾರ್ಯಕರ್ತರುಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಭಜರಂಗದಳದ ತಾಲೂಕು ಸಹಸಂಚಾಲಕ ಪ್ರವೀಣ್ ಮಾತನಾಡಿ, ಜಿಲ್ಲೆಯಲ್ಲಿ ಕೆಲವು ತಿಂಗಳುಗಳಿಂದ ಗೋಹತ್ಯೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಹೊರತಾಗಿಯೂ ಯಾವದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳ ಗಮನ ಸೆಳೆಯುವ ಸಲುವಾಗಿ ಗೋರಕ್ಷಕ ಯಾತ್ರೆಯನ್ನು ಸ್ವತಃ ರಾಮಚಂದ್ರಾಪುರ ಮಠದ ಶ್ರೀ ರಾಘವೇಂದ್ರ ಶ್ರೀಗಳು ಆಯೋಜಿಸಿದ್ದಾರೆ ಎಂದರು.
ಗೋಷ್ಠಿಯಲ್ಲಿ ಬಜರಂಗದಳ ತಾಲೂಕು ಸಂಚಾಲಕ ವಿವೇಕ್ ರೈ, ಸಿದ್ದಾಪುರ ನಗರ ಸಂಚಾಲಕ ಪ್ರದೀಶ್ ಹಾಗೂ ತಾಲೂಕು ಗೋರಕ್ಷಕ ಸಮಿತಿಯ ಕಿಶನ್ ಇದ್ದರು.