ಮಡಿಕೇರಿ, ಜ. 1: ನಂಜರಾಯಪಟ್ಟಣ ಗ್ರಾ.ಪಂ. ವ್ಯಾಪ್ತಿಯಲ್ಲಿ ಪ್ರವಾಸಿಗರ ಆಕರ್ಷಣೆಯ ತಾಣವಾಗಿರುವ ದುಬಾರೆ ಹಾಗೂ ಇತರೆಡೆಗಳಲ್ಲಿ ನಡೆಯುತ್ತಿರುವ ರ್ಯಾಫ್ಟಿಂಗ್ ಮತ್ತು ಅಲ್ಲಲ್ಲಿ ತಲೆಯೆತ್ತಿರುವ ಗೂಡಂಗಡಿಗಳ ತೆರಿಗೆ ವಸೂಲಿ ಬಗ್ಗೆ ಗೊಂದಲ ಬಗೆಹರಿಯದೆ ಗ್ರಾ.ಪಂ. ಆಡಳಿತ ಅಡಕತ್ತರಿಯಲ್ಲಿ ಸಿಲುಕಿರು ವಂತಿದೆ. ಪರಿಣಾಮ ರ್ಯಾಫ್ಟಿಂಗ್ ಮಾಲೀಕರು ಹಾಗೂ ಗೂಡಂಗಡಿ ನಡೆಸುವವರು ಪಂಚಾಯಿತಿಗೆ ಕಂದಾಯ ರೂಪದಲ್ಲಿ ತೆರಿಗೆ ಪಾವತಿ ಮಾಡದಿರುವದು ಗೋಚರಿಸಿದೆ.

ಅನೇಕ ವರ್ಷಗಳ ಹಿಂದೆ ನಂಜರಾಯಪಟ್ಟಣ ಹಾಗೂ ಸುತ್ತ ಮುತ್ತಲಿನ ಯುವಕರು ಪ್ರವಾಸೋದ್ಯಮ ಸೇರಿದಂತೆ ಗ್ರಾ.ಪಂ.ನಿಂದ ನಿರಾಕ್ಷೇಪಣಾ ಪತ್ರ ಪಡೆದು ಹತ್ತಕ್ಕೂ ಅಧಿಕ ಇಲಾಖೆಗಳ ಅನುಮತಿಯೊಂದಿಗೆ ಕಾವೇರಿ ನದಿಯಲ್ಲಿ ದುಬಾರೆ ದ್ವೀಪ ಸುತ್ತಲೂ ರ್ಯಾಫ್ಟಿಂಗ್ ನಡೆಸಿಕೊಂಡು ಬರುತ್ತಿದ್ದಾರೆ.

ಪರಿಣಾಮ ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಸಹಜವಾಗಿಯೇ ಬೆಳೆಯುವದರೊಂದಿಗೆ, ದೇಶ ವಿದೇಶಗಳಿಂದಲೂ ಪ್ರವಾಸಿಗರು ಬಂದು ಹೋಗುವಷ್ಟು ಪ್ರಸಿದ್ಧಿ ಪಡೆದಿದೆ. ಒಂದೆಡೆ ಅರಣ್ಯ ಇಲಾಖೆ ಯಿಂದ ಸಾಕಾನೆ ಶಿಬಿರ, ಸವಾರಿ ಇತ್ಯಾದಿ ಪ್ರವಾಸಿಗರ ಆಕರ್ಷಿಸಿದರೆ, ರ್ಯಾಫ್ಟಿಂಗ್ ಕೂಡ ಗ್ರಾಮದ ಯುವಕರೊಂದಿಗೆ ನೂರಾರು ಗಿರಿಜನ ಕುಟುಂಬಗಳಿಗೆ ಬದುಕು ಕಲ್ಪಿಸಿದೆ.

ಹೀಗಾಗಿ ನಂಜರಾಯಪಟ್ಟಣ ಗ್ರಾ.ಪಂ. ಕೂಡ ರ್ಯಾಫ್ಟಿಂಗ್ ನಡೆಸು ವವರಿಂದ ಮತ್ತು ವ್ಯಾಪಾರೋದ್ಯಮ ಗಳಿಂದ ವರ್ಷದಿಂದ ವರ್ಷಕ್ಕೆ ಸಂತೆ ಸುಂಕ ರೀತಿ ತೆರಿಗೆಯನ್ನು ಹೆಚ್ಚಿಸುತ್ತಾ ಬಂದಿದೆ. ಕೇವಲ ವಾಹನ ನಿಲುಗಡೆ ಶುಲ್ಕವೇ ವಾರ್ಷಿಕ ರೂ. 20 ಲಕ್ಷಕ್ಕೂ ಅಧಿಕ ಇಲ್ಲಿ ಗ್ರಾ.ಪಂ.ಗೆ ಆದಾಯ ನೀಡಿದೆ.

ರ್ಯಾಫ್ಟಿಂಗ್‍ನಿಂದಲೂ ಸುಮಾರು 16 ಮಂದಿಯ ತಂಡ ಗ್ರಾ.ಪಂ.ಗೆ ವಾರ್ಷಿಕ ರೂ. 15 ಸಾವಿರದಂತೆ ಒಬ್ಬೊಬ್ಬರು ಇತ್ತೀಚಿನ ವರ್ಷದಲ್ಲಿ ಪಾವತಿಸಲು ಮುಂದಾಗಿದ್ದಾರೆ. ಸಹಜವಾಗಿಯೇ

(ಮೊದಲ ಪುಟದಿಂದ) ಪ್ರವಾಸೋದ್ಯಮದೊಂದಿಗೆ ಇದು ಗ್ರಾಮೀಣ ಯುವಕರಿಗೆ ಲಾಭದಾಯಕ ವೃತ್ತಿಯಾಗಿ ಕಂಡುಬಂದಿದ್ದು, ಪ್ರವಾಸೋದ್ಯಮ ಮುಖಾಂತರ ಎರಡು ವರ್ಷಗಳ ಹಿಂದಿನ ಜಿಲ್ಲಾಧಿಕಾರಿ ರ್ಯಾಫ್ಟಿಂಗ್ ಸಂಬಂಧ ಬಹಿರಂಗ ಟೆಂಡರ್ ಆಹ್ವಾನಿಸಿದ್ದಾರೆ.

ಈ ವೇಳೆ ಅಲ್ಲಿನ ಸ್ಥಳೀಯರು ನ್ಯಾಯಾಲಯದಿಂದ ಈ ಪ್ರಕ್ರಿಯೆಗೆ ತಡೆಯಾಜ್ಞೆ ತಂದಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿಗಳು ಅಂದು ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿದ್ದಾರೆ. ಬಳಿಕ ಜಿಲ್ಲಾಧಿಕಾರಿಗಳು ಒಬ್ಬರ ಹಿಂದೆ ಒಬ್ಬರು ಬದಲಾಗುತ್ತಾ ಬಂದಿದ್ದಾರೆ.

ಆ ಎಲ್ಲ ಕಾರಣಗಳಿಂದ ಇಂದು ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ರ್ಯಾಫ್ಟಿಂಗ್ ಮಾಲೀಕರ ಸಹಿತ ಗೂಡಂಗಡಿಗಳಿಂದ ತೆರಿಗೆ ಅಥವಾ ನೆಲಬಾಡಿಗೆ ಕೂಡ ವಸೂಲಿ ಮಾಡಿಲ್ಲ. ರ್ಯಾಫ್ಟಿಂಗ್ ಮಾಲೀಕರು ಹಣ ಪಾವತಿಸಲು ಸಿದ್ಧರಿದ್ದರೂ ಪಡೆದುಕೊಂಡು ರಶೀತಿ ನೀಡಲು ಪಂಚಾಯಿತಿ ಆಡಳಿತ ಮುಂದಾಗುತ್ತಿಲ್ಲ

ಇನ್ನೊಂದೆಡೆ ಈಗಾಗಲೇ ಅಧಿಕೃತ ಪರವಾನಗಿಯೊಂದಿಗೆ ದುಬಾರೆಯಲ್ಲಿ ನಡೆಯುತ್ತಿರುವ ಹೊಟೇಲ್ ಉದ್ಯಮಗಳ ಸಹಿತ ವ್ಯಾಪಾರ ಮಳಿಗೆಗಳು ಇದ್ದರೂ, ಅವುಗಳ ಎದುರುಗಡೆ ದಿನೇ ದಿನೇ ಗೂಡಂಗಡಿಗಳು ಸಾಲು ಸಾಲಾಗಿ ತಲೆಯೆತ್ತುತ್ತಿರುವದು ಅಸಮಾಧಾನಕ್ಕೆ ಕಾರಣವಾಗಿದೆ.

ಸಾವಿರಾರು ಸಂಖ್ಯೆಯಲ್ಲಿ ನಿತ್ಯ ದುಬಾರೆಗೆ ಪ್ರವಾಸಿಗರು ಬಂದು ಹೋಗುತ್ತಿದ್ದರೂ ಸ್ವಚ್ಛತೆ ಸೇರಿದಂತೆ ಯಾವದೇ ಮೂಲಭೂತ ಸೌಕರ್ಯದತ್ತ ಮೌನ ವಹಿಸಿದ್ದು, ರಸ್ತೆಗಳು ಗುಂಡಿ ಬಿದ್ದು ಪ್ರವಾಸಿ ವಾಹನಗಳು ದೂಳೆಬ್ಬಿಸುತ್ತಾ ಓಡಾಟದಲ್ಲಿರುವದು ಕಂಡು ಬರುತ್ತಿದೆ.

ಇತ್ತೀಚೆಗೆ ರ್ಯಾಫ್ಟಿಂಗ್ ಮಾಲೀಕರ ವಿರುದ್ಧ ಗ್ರಾ.ಪಂ. ಆಡಳಿತವೇ ಧರಣಿ ನಡೆಸಿದ್ದರೆ, ಪಂಚಾಯಿತಿ ವಿರುದ್ಧ ರ್ಯಾಫ್ಟಿಂಗ್ ಅಸೋಸಿಯೇಷನ್ ಕಾನೂನು ಸಮರದ ಸುಳಿವು ನೀಡಿದೆ. ಗ್ರಾ.ಪಂ. ಕೂಡ ಯಾವದೇ ನಿರ್ಧಾರ ತಳೆಯುವ ಬದಲಿಗೆ ಮೌನವಹಿಸಿರುವದು ಅಚ್ಚರಿಗೆ ಕಾರಣವಾಗಿದೆ.

ಒಟ್ಟಿನಲ್ಲಿ ಕಾವೇರಿ ಹೊಳೆ ತಟದಲ್ಲಿ, ಜಿಲ್ಲೆಯಲ್ಲೇ ಅತ್ಯಧಿಕ ಪ್ರವಾಸಿಗರನ್ನು ಆಕರ್ಷಿಸುವ ತಾಣದಂತಿರುವ ದುಬಾರೆಯಂತಹ ಪ್ರದೇಶವನ್ನು ಹೊಂದಿರುವ ನಂಜರಾಯಪಟ್ಟಣ ಗ್ರಾ.ಪಂ. ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವಂತಿದೆ. ರ್ಯಾಫ್ಟಿಂಗ್ ಹಾಗೂ ವ್ಯಾಪಾರೋದ್ಯಮದಿಂದ ಲಭಿಸುವ ಆದಾಯವನ್ನು ಕೂಡ ಕ್ರೋಢೀಕರಿಸದೆ ಇರುವದು ಅಚ್ಚರಿಗೆ ಕಾರಣವಾಗಿದೆ.

ಇಲ್ಲಿ ಎದುರಾಗಿರುವ ಕಾನೂನಿನ ತೊಡಕುಗಳನ್ನು ನಿವಾರಿಸಿಕೊಂಡು, ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಇತರ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮಾಲೋಚಿಸಿ ಗ್ರಾ.ಪಂ. ಸಹಿತ ರ್ಯಾಫ್ಟಿಂಗ್ ಅಸೋಸಿಯೇಷನ್ ನಡುವಿನ ಗೊಂದಲ ನಿವಾರಿಸಬೇಕಿದೆ. ಆ ಮುಖಾಂತರ ನಿತ್ಯ ಬರುವ ಸಾವಿರಾರು ಪ್ರವಾಸಿಗರಿಗೆ ಕನಿಷ್ಟ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಬೇಕಿದೆ. ಸಂಘರ್ಷದ ಬದಲಿಗೆ ಸೌಹಾರ್ದತೆಗೆ ಕಾಳಜಿ ತೋರಬೇಕಿದೆ. ಅದು ಜವಾಬ್ದಾರಿಯುತರ ಕರ್ತವ್ಯ ಕೂಡ.