*ಗೋಣಿಕೊಪ್ಪಲು, ಡಿ. 31: ನಾಗರಹೊಳೆ ಅರಣ್ಯದ ಅಂಚಿನ ತಿತಿಮತಿ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ಶತಮಾನೋತ್ಸವಕ್ಕೆ ಸಜ್ಜುಗೊಳ್ಳುತ್ತಿದೆ. 1916ರಲ್ಲಿ ಆರಂಭವಾದ ಶಾಲೆಗೆ ಈಗ 101 ವರ್ಷಗಳು ತುಂಬಿವೆ. ಅಂದು ಶಾಲೆ ತಿತಿಮತಿ ಬಸ್ ನಿಲ್ದಾಣದ ಪಕ್ಕದಲ್ಲಿ ಖಾಸಗಿ ಕಟ್ಟಡೊಂದರಲ್ಲಿ ಆರಂಭಗೊಂಡಿತು. ಈ ಶಾಲೆಯ ಸುತ್ತಮುತ್ತ ಯಾವದೇ ಶಾಲೆಗಳಿರಲಿಲ್ಲ. ಅಂದು ಇಲ್ಲಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಪೊನ್ನಂಪೇಟೆಗೆ ಬರಬೇಕಾಗಿತ್ತು.
1925ರಲ್ಲಿ ಮರಾಠಿ ನಂಜಮ್ಮ ಅವರು ಬಸ್ ನಿಲ್ದಾಣದ ಪಕ್ಕದಲ್ಲಿಯೇ 3.16 ಎಕರೆ ಜಾಗ ನೀಡಿ ಶಾಲೆಗೆ ಉದಾರವಾಗಿ 3 ಕೊಠಡಿಗಳನ್ನು ನಿರ್ಮಿಸಿಕೊಟ್ಟರು. 1952ರಲ್ಲಿ ಮನೆಯಪಂಡ ಗಣಪತಿ ತಮ್ಮ ತಂದೆ-ತಾಯಿ ನೆನಪಿನಲ್ಲಿ ಒಂದು ಕೊಠಡಿ ಕಟ್ಟಿಸಿಕೊಟ್ಟರು. ಬಳಿಕ 1953ರಲ್ಲಿ ಜಿಲ್ಲಾ ಬೋರ್ಡ್ (ಇದೀಗ ಜಿಲ್ಲಾ ಪಂಚಾಯಿತಿ) ಶಾಲೆಯನ್ನು ಪಡೆದುಕೊಂಡಿತು. ಅಂದಿನಿಂದ ಶಾಲೆ ಸರ್ಕಾರದ ವಶಕ್ಕೆ ಸೇರ್ಪಡೆಯಾಯಿತು. ಇದೀಗ ಸರಕಾರ ಮತ್ತು ದಾನಿಗಳ ನೆರವಿನಿಂದ ಶಾಲೆ ಹೆಮ್ಮರವಾಗಿ ಬೆಳೆದಿದೆ.
ದಾನಿಗಳ ಕೊಡುಗೆ: ಗುಂಬೀರ ಸುಬ್ಬಯ್ಯ ಗೇಟ್, ಮನೆಯಪಂಡ ಚಿಟ್ಟಿಯಪ್ಪ ಅವರ ಹೆಸರಿನಲ್ಲಿ ಮೈದಾನದ ಗೇಟ್ ಅಳವಡಿಸಲಾಗಿದೆ. ಪಿ.ಕೆ. ಗೋಪಾಲಕೃಷ್ಣ ಧ್ವಜಸ್ತಂಭ. ಚೆಪ್ಪುಡೀರ ಪೊನ್ನಮ್ಮ ಮುದ್ದಪ್ಪ ಅವರ ಮಕ್ಕಳು ಸೋಮಯ್ಯ ಮುದ್ದಪ್ಪ ಅವರ ನೆನಪಿನಲ್ಲಿ ರೂ. 2.5 ಲಕ್ಷ ವೆಚ್ಚದಲ್ಲಿ ವಿಶಾಲವಾದ ಸಭಾಂಗಣ ಕಟ್ಟಡವನ್ನು ನಿರ್ಮಿಸಿಕೊಟ್ಟಿದ್ದಾರೆ. ಹಿರಿಯರಾದ ಶರಣು ಪಿಳ್ಳೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಸ್ನೇಹ ಬಳಗದವರು ನಾಮಫಲಕ ಹಾಕಿಸಿಕೊಟ್ಟಿದ್ದಾರೆ. 1991ರಲ್ಲಿ 729 ವಿದ್ಯಾರ್ಥಿಗಳಿದ್ದರು. ಇದೀಗ 249 ವಿದ್ಯಾರ್ಥಿಗಳಿದ್ದಾರೆ. 7 ನೇ ತರಗತಿವರೆಗೆ ಇರುವ ಶಾಲೆಯಲ್ಲಿ ಪರಿಶಿಷ್ಟ ಪಂಗಡದ ಹೆಣ್ಣು ಮಕ್ಕಳು ಹೆಚ್ಚಾಗಿ ವ್ಯಾಸಂಗ ಮಾಡುತ್ತಿ ದ್ದಾರೆ. 82 ಹೆಣ್ಣು ಮಕ್ಕಳಿದ್ದರೆ 61 ಗಂಡು ಮಕ್ಕಳಿದ್ದಾರೆ. ಪರಿಶಿಷ್ಟ ಜಾತಿಯ 14 ಬಾಲಕಿಯರು, 17 ಬಾಲಕರಿದ್ದಾರೆ. ಮಾಜಿ ಸಚಿವೆ ಸುಮಾ ವಸಂತ್ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದವರು. ಇನ್ನೂ ಉಳಿದವರು ಉನ್ನತ ಅಧಿಕಾರಿಗಳಾಗಿದ್ದಾರೆ. ವಿಜ್ಞಾನಿಗಳಿದ್ದಾರೆ.
ಹೆಚ್.ಎಂ. ಪಾರ್ವತಿ ಮಖ್ಯ ಶಿಕ್ಷಕಿಯಾಗಿ, ಬಿ.ಬಿ. ಸ್ವಾತಿ, ಸುನಿತಾ ಕುಮಾರಿ, ಎಂ.ಎನ್. ರಾಣಿ, ಬಿ.ಎಂ. ಮೀರಾ, ಎಸ್. ಪರಮೇಶ್, ಹೆಚ್.ಡಿ. ಮೊಣ್ಣಕ್ಕಿ, ಬಿ. ಮಂಜುಳಾ, ಎಂ. ಗೌರಮ್ಮ, ಪ್ರಮಿಳಾ ಶಿಕ್ಷಕರಾಗಿದ್ದಾರೆ. ಅಪ್ರೋಶ್ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಧರಣಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ದಾನಿಗಳಾದ ಎ.ಟಿ. ಭೀಮಯ್ಯ, ಪಿ.ಡಿ. ಕಾವೇರಮ್ಮ, ಮಲ್ಲೇಂಗಡ ಚಂಗಪ್ಪ, ಧರ್ಮಲಿಂಗಂ ಪಿಳ್ಳೆ, ಕಾವೇರಪ್ಪ, ಪಾಲೇಂಗಡ ಜೋಯಪ್ಪ, ಪಿ.ಜೆ. ದೇವಮ್ಮ, ಮಾಯಮ್ಮ, ಉಜ್ಜಯಿನಿಗೌಡ, ಹೆಚ್.ವಿ. ಬಸವರಾಜು, ಚೇಂದ್ರಿಮಾಡ ದೇವಕಿ, ಮೂಡಗದ್ದೆ ವಿಶ್ವನಾಥ್ ಹಾಗೂ ಹಳೆ ವಿದ್ಯಾರ್ಥಿ ಸಂಘದವರು ವಿದ್ಯಾರ್ಥಿಗಳ ಪ್ರತಿಭಾ ಪ್ರೋತ್ಸಾಹಕ್ಕೆ ಸಾವಿರಾರು ರೂಪಾಯಿಗಳ ದತ್ತಿನಿಧಿ ಸ್ಥಾಪಿಸಿದ್ದಾರೆ. ಹಿರಿಯರಾದ ಮನೆಯಪಂಡ ಪ್ರತಾಪ್ ಚಿಟ್ಟಿಯಪ್ಪ, ಪಿ.ಸಿ. ಬೆಳ್ಳಿಯಪ್ಪ, ಕೃಷ್ಣ, ಮಾಜಿ ಸಚಿವೆ ಸುಮಾ ವಸಂತ್ ಮುಂತಾದವರು ಇದೇ ಶಾಲೆಯಲ್ಲಿ ಓದಿದ್ದಾರೆ.
ಇದೀಗ ಜಿಲ್ಲಾ ಪಂಚಾಯಿತಿ ಸದಸ್ಯೆ ಪಿ.ಆರ್. ಪಂಕಜಾ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಜಂಟಿಯಾಗಿ ರೂ. 5 ಲಕ್ಷ ವೆಚ್ಚದಲ್ಲಿ ಶತಮಾನೋತ್ಸವದ ನೆನಪಿಗಾಗಿ ನೂತನ ಸಭಾಂಗಣವನ್ನು ನಿರ್ಮಿಸಿಕೊಡುತ್ತಿದ್ದಾರೆ.
- ಎನ್.ಎನ್. ದಿನೇಶ್