ಮಡಿಕೇರಿ, ಡಿ. 31: ಶೀರ್ಷಿಕೆ ನೋಡಿ ಹುಬ್ಬೇರಿಸಬೇಡಿ... ಇದೇನಪ್ಪಾ ಶ್ರೀಕೃಷ್ಣ ಹಾಗೂ ಅರ್ಜುನ ಪೊಲೀಸ್ ಮೈದಾನಕ್ಕೆ ಬಂದಿದ್ದರೆ ಎಂದು ಆಶ್ಚರ್ಯಪಡಬೇಡಿ.
ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ಪೊಲೀಸ್ ಮೈದಾನದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಕ್ರೀಡಾಕೂಟದ ಅಂತಿಮ ದಿನವಾದ ನಿನ್ನೆ ಸಂಜೆ ಬೆಳ್ಳಿರಥದಲ್ಲಿ ಕೃಷ್ಣ ಹಾಗೂ ಅರ್ಜುನ ಬಂದಿದ್ದರು. ಆದರೆ ಮಹಾ ಭಾರತದ ಕೃಷ್ಣಾರ್ಜುನರಲ್ಲ ಪೊಲೀಸ್ ಮೈದಾನಕ್ಕೆ ಬಂದಿದ್ದವರು, ಕೃಷ್ಣ ಮತ್ತು ಅರ್ಜುನ ವೇಷಧಾರಿಗಳು!
ಹೌದು ಪ್ರತಿವರ್ಷ ವಿಭಿನ್ನ ವೇಷ ಭೂಷಣದೊಂದಿಗೆ ಪೊಲೀಸ್ ಕ್ರೀಡಾಕೂಟಕ್ಕೆ ವಿಶೇಷ ಮೆರುಗು ನೀಡುವ ಸುಂಟಿಕೊಪ್ಪ ಸಹಾಯಕ ಠಾಣಾಧಿಕಾರಿ ಪಾರ್ಥ ಅವರು ಅರ್ಜುನನ ವೇಷಧರಿಸಿ ರಥದಲ್ಲಿ ಯುದ್ಧ ಮಾಡಲು ಬಂದಿದ್ದರು. ಅವರ ರಥದ ಸಾರಥಿಯಾಗಿ ಶ್ರೀಕೃಷ್ಣನ ವೇಷವನ್ನು ಜಿಲ್ಲಾ ಅಪರಾಧ ಪತ್ತೆದಳದ ತಮ್ಮಯ್ಯ ಧರಿಸಿದ್ದರು.
ಕಳೆದ ಬಾರಿ ಪವನಸುತ ಆಂಜನೇಯ ವೇಷ ಧರಿಸಿ ಕ್ರೆನ್ ಮೂಲಕ ಹಾರಿಬಂದು ಗಮನ ಸೆಳೆದಿದ್ದ ಪಾರ್ಥ ಅವರು ಈ ಬಾರಿ ಅರ್ಜುನನ ವೇಷದಲ್ಲಿ ಬಿಲ್ಲು-ಬಾಣದೊಂದಿಗೆ ಬಂದು ನೆರೆದಿದ್ದವರ ಮನಸೂರೆಗೊಂಡರು. ಅದೇ ರೀತಿ ತಮ್ಮಯ್ಯ ಅವರು ಕೂಡ ಶ್ರೀಕೃಷ್ಣನಂತೆಯೆ ವೇಷಧರಿಸಿ ಅರ್ಜುನನಿಗೆ ಸಾರಥಿಯಾಗಿ ಕಂಗೊಳಿಸಿದರು. ನೆರೆದಿದ್ದ ಮಂದಿ ಶಿಳ್ಳೆ-ಚಪ್ಪಾಳೆಯೊಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
-ಉಜ್ವಲ್ ರಂಜಿತ್