ಮಡಿಕೇರಿ, ಡಿ. 31: ಅಬ್ಬಬ್ಬಾ... ಇತ್ತೀಚೆಗಷ್ಟೆ ಹೊಸ ವರ್ಷಾಚರಣೆ ಆಚರಿಸಿಕೊಂಡ ನೆನಪು ಕಾಡುತ್ತಿದೆ... ಇಷ್ಟು ಬೇಗ ಹನ್ನೆರಡು ತಿಂಗಳು ಕಳೆದು ಹೋದವೇ..? ಈ ಹನ್ನೆರಡು ತಿಂಗಳಿನಲ್ಲಿ ಏನೇನಾಯಿತು, ಏಳು... ಬೀಳುಗಳೇನು... ಸವಿನೆನಪೇನು... ಮರೆಯಲಾಗದ ಘಟನೆ ಏನು... ಎಂಬದು ಚರ್ಚಾವಸ್ತುವಾಗಿತ್ತು.... ಇದರೊಂದಿಗೆ ದುಃಖದುಮ್ಮಾನ.... ಸಂತಸ ಹಂಚಿಕೊಳ್ಳುವಿಕೆ... ಇದಕ್ಕೆ ಹಾಡು ಕುಣಿತ, ನೃತ್ಯ... ಭೂರೀ ಭೋಜನ... ಕೊಡಗಿನ ಚಳಿಯನ್ನು ಹೋಗಲಾಡಿ ಸಲು ಒಂದಷ್ಟು ‘ಔಷಧಿ’ ಕ್ಯಾಂಪ್ ಫಯರ್, ಡಿ.ಜೆ., ಮ್ಯೂಸಿಕ್... ನಂತಹ ವೈವಿದ್ಯಮಯ ಸಂಭ್ರಮದೊಂದಿಗೆ 2017ನೇ ವರ್ಷ ಇತಿಹಾಸದ ಪುಟ ಸೇರಿದರೆ ಹೊಸ ವರುಷ 2018ನ್ನು ಜನತೆ ಹರುಷದಿಂದ ಬರಮಾಡಿಕೊಂಡರು.

ಕೊಡಗು ಜಿಲ್ಲೆಯಲ್ಲಿನ ಹೊಸ ವರ್ಷಾಚರಣೆ ಎಂದರೆ ಪ್ರವಾಸಿಗರಿಗೆ ಅದೇನೋ ವಿಶೇಷ ಪ್ರೀತಿ... ಇಡೀ ಜಿಲ್ಲೆ, ನಗರ, ಪಟ್ಟಣ ಪ್ರದೇಶಗಳು ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಲ್ಲೂ ಡಿಸೆಂಬರ್ 31ರ ದಿನ ವಿಶೇಷವಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಬೀಡು ಬಿಟ್ಟಿರುವ ಪ್ರವಾಸಿಗರೊಂದಿಗೆ ಸ್ಥಳೀಯರೂ 2018ರ ಸಂಭ್ರಮಾಚರಣೆಯಲ್ಲಿ ಭಾಗಿಗಳಾದರು.

ಹಗಲು ವೇಳೆ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದ ಪ್ರವಾಸಿಗರು ಸಂಜೆಯಾಗುತ್ತಿದ್ದಂತೆ ತಾವು ಈ ಮೊದಲೇ ಮಾಡಿಕೊಂಡಿದ್ದ ವ್ಯವಸ್ಥೆಯ ಸ್ಥಳ ಸೇರಿಕೊಂಡರು. ಸಂಜೆ ಮಡಿಕೇರಿಯ ರಾಜಾಸೀಟ್‍ನಲ್ಲಿ ಸೂರ್ಯಾಸ್ತವನ್ನು ವೀಕ್ಷಿಸಲು ಅಧಿಕ ಸಂಖ್ಯೆಯಲ್ಲಿ ಜನ ಸೇರಿದ್ದರು. ಕತ್ತಲು ಕವಿಯುತ್ತಿದ್ದಂತೆ ಬೆಳಕಿನ ಚಿತ್ತಾರ ಗೋಚರಿಸಲಾರಂಭಿಸಿತು. ಬಹುತೇಕ ಎಲ್ಲಾ ವಸತಿಗೃಹ, ರೆಸಾರ್ಟ್, ಹೋಂಸ್ಟೇಗಳು ಭರ್ತಿಯಾಗಿದ್ದು, ಎಲ್ಲೆಲ್ಲೂ ಒಂದಲ್ಲಾ ಒಂದು ಕಾರ್ಯಕ್ರಮ ಆಯೋಜನೆಗೊಂಡಿತ್ತು. ಪೊಲೀಸ್ ಇಲಾಖೆ ಹಲವು ನಿಯಮಗಳನ್ನು ವಿಧಿಸಿದ್ದರೂ ಜನರ ಸಂಭ್ರಮಕ್ಕೆ ಪಾರವಿರಲಿಲ್ಲ.

(ಮೊದಲ ಪುಟದಿಂದ) ಹಾಡು... ನೃತ್ಯ... ಪಾರ್ಟಿಗಳ ಮೂಲಕ ಯುವ ಸಮೂಹ ಸಂಭ್ರಮದಲ್ಲಿ ತೇಲಾಡಿದರೆ ಹಿರಿಯರೂ ತಾವೇನೂ ಕಡಿಮೆ ಇಲ್ಲ ಎಂಬಂತೆ ತೊಡಗಿಸಿ ಕೊಂಡಿದ್ದರು. ಜಿಲ್ಲೆಯ ಬಹುತೇಕ ಕ್ಲಬ್‍ಗಳಲ್ಲೂ ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳ ಲಾಯಿತು. ರಾತ್ರಿಯಾಗುತ್ತಿದ್ದಂತೆ ಅಲ್ಲಲ್ಲಿ ಸಂಗೀತದ ಅಬ್ಬರ, ಹಾಡು... ಕೇಕೆ... ಮಾರ್ದನಿಸುತ್ತಿದ್ದರೆ ಪಟಾಕಿ... ಸಿಡಿಮದ್ದುಗಳು ಆಗಸದಲ್ಲಿ ನಲಿದಾಡುತ್ತಿತ್ತು. ಇವೆಲ್ಲಕ್ಕಿಂತ ಹೆಚ್ಚಾಗಿ ವಿಶಿಷ್ಟವಾದ ವಾಲಗದ ನಿನಾದಕ್ಕೆ ಬಹುತೇಕರು ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ನಿಗದಿತ ಸಮಯವಾದ ರಾತ್ರಿ 12 ಗಂಟೆಯಾಗುತ್ತಿದ್ದಂತೆ ಪರಸ್ಪರ ಆಲಿಂಗನ ಹಸ್ತಲಾಘವ ದೊಂದಿಗೆ ‘ಹ್ಯಾಪಿ ನ್ಯೂ ಇಯರ್’ 2018ರ ಶುಭಾಶಯ ವಿನಿಮಯ ಮಾಡಿಕೊಳ್ಳುವದರೊಂದಿಗೆ ಹೊಸ ವರುಷವನ್ನು ಸಂಭ್ರಮದಿಂದ ಬರಮಾಡಿಕೊಂಡರು.

ಪೊಲೀಸ್ ಇಲಾಖೆ ರಾತ್ರಿ 12.30ರ ನಂತರ ಬಹಿರಂಗವಾಗಿ ಪಾರ್ಟಿ ಮಾಡಲು ಕಡಿವಾಡ ಹಾಕಿತ್ತಾದರೂ ಆ ಬಳಿಕವೂ ವಾಹನಗಳ ಓಡಾಟ, ಪರಸ್ಪರ ಶುಭ ಹಾರೈಕೆ, ಸಂಗೀತ ಅಲ್ಲಲ್ಲಿ ಕೇಳಿ ಬರುತ್ತಿತ್ತು. ಖಾಸಗಿ ಜಾಗದಲ್ಲಿ ಬೆಳಗ್ಗಿನ ಜಾವದ ತನಕವೂ ಮೋಜು-ಮಸ್ತಿ ಮುಂದುವರಿದಿತ್ತು.

ಹೊಸ ಹರುಷದೊಂದಿಗೆ ಹೊಸ ವರುಷ ಬಂದಿದೆ, ಸಾಮರಸ್ಯದ ಬದುಕು ಎಲ್ಲರದ್ದಾಗಲಿ.

-ಶಶಿಸೋಮಯ್ಯ