ಭಾಗಮಂಡಲ/ಕರಿಕೆ, ಡಿ. 31: ವಿದ್ಯುನ್ಮಾನದಲ್ಲಿ ಕನ್ನಡದ ಲಿಪಿ ಜೋಡಣೆ ಬೆಳವಣಿಗೆ ಕಾಣಬೇಕಾಗಿದೆ. ಮೊಬೈಲ್‍ಗಳಲ್ಲಿಯೂ ಕೂಡ ‘‘ನುಡಿ’’ ಅಕ್ಷರವನ್ನು ಬಳಸುವ ನವ ವಿಧಾನವನ್ನು ಕಂಡು ಹಿಡಿಯ ಬೇಕಾಗಿದೆ. ಈ ದಿಸೆಯಲ್ಲಿ ಕಸಾಪ ಸರ್ಕಾರವನ್ನು ಜಾಗೃತಗೊಳಿಸಲಿ ಎಂದು ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಹೇಳಿದರು. ಕರಿಕೆಯಲ್ಲಿ ನಡೆದ ಮಡಿಕೇರಿ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿ ದರು. ಸಾಮಾಜಿಕ ಜಾಲತಾಣಗಳನ್ನು ಗ್ರಾಮೀಣರು ಕೂಡ ಬಳಸುತ್ತಿದ್ದು ಆಕರ್ಷಿಸುವಂತೆ ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಕನ್ನಡವನ್ನು ‘‘ನುಡಿ’’ ಗೆ ಬರುವಂತೆ ತೆಗೆದುಕೊಳ್ಳಲು ಸರ್ಕಾರ ಕ್ರಮಕೈಗೊಳ್ಳಬೇಕಾಗಿದೆ.

ಸರ್ಕಾರ ಮತ್ತು ಜನಪ್ರತಿನಿಧಿಗಳು ಕನ್ನಡದ ಬಗ್ಗೆ ವೇದಿಕೆಯಲ್ಲಿ ಭಾಷಣ ಬಿಗಿಯುವದಲ್ಲದೆ ಕನ್ನಡಕ್ಕೆ ಯಾವ ಕೊಡುಗೆಯನ್ನೂ ನೀಡಿಲ್ಲ ಎಂದರು. ಸರ್ಕಾರ ಇನ್ನೂ ಕನ್ನಡ ಲಿಪಿ ಮತ್ತು ನುಡಿಯನ್ನು ಜಾಲತಾಣಕ್ಕೆ ಪರಿವರ್ತನೆ

(ಮೊದಲ ಪುಟದಿಂದ) ಮಾಡಿಲ್ಲ. ಸರ್ಕಾರ ನಾನಾ ಭಾಗ್ಯಗಳನ್ನು ಜಾರಿಗೆ ತಂದರೂ ಕನ್ನಡ ಭಾಷೆಯನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಆಸಕ್ತಿವಹಿಸದೇ ಇರುವದು ದುರದೃಷ್ಟಕರ. ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತು ನಿರ್ಣಯ ಕೈಗೊಂಡು ಸರ್ಕಾರಕ್ಕೆ ತಿಳಿಸಿಕೊಡಬೇಕಿದೆ. ಅಂತರ್ಜಾಲದಲ್ಲಿ ಖಾಸಗಿ ಸಂಸ್ಥೆಗಳು ಕನ್ನಡದಲ್ಲಿ ಪುಸ್ತಕ ಹೊರತರುತ್ತಿದ್ದರೂ ಸರ್ಕಾರ ಈ ನಿಟ್ಟಿನಲ್ಲಿ ಜಾಣ ಕುರುಡುತನ ಪ್ರದರ್ಶಿಸುತ್ತಿದೆ. ಕನ್ನಡ ಭಾಷೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೂಡಲೇ ಗಮನಹರಿಸು ವಂತೆ ಸಲಹೆ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಕುಡೆಕಲ್ ಸಂತೋಷ್ ಮಾತನಾಡಿ ಕನ್ನಡದ ಬೆಳವಣಿಗೆಗೆ ಒಗ್ಗಟ್ಟಿನಿಂದ ನಾವು ಕೆಲಸ ಮಾಡಬೇಕಿದೆ. ಕರಿಕೆ ಭಾಗದಲ್ಲಿ ನಡೆಸಿದ ಈ ಸಮ್ಮೇಳನ ಯಶಸ್ವಿಯಾಗಿ ಜನಮನ ಸೆಳೆದಿದೆ. ಎಲೆ ಮರೆ ಕಾಯಿಯಂತಿರುವ ಸಾಧಕರನ್ನು ಗುರುತಿಸಿ ಸನ್ಮಾನಿಸಿರು ವದು ತೃಪ್ತಿಯನ್ನು ತಂದಿದೆ. ಸಮ್ಮೇಳನದ ಯಶಸ್ಸಿಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.

ಈ ಸಂದರ್ಭ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು. ಸಾಹಿತ್ಯ ಕ್ಷೇತ್ರದಲ್ಲಿ ವಿದ್ಯಾಧರ್, ಕ್ರೀಡಾಕ್ಷೇತ್ರದಲ್ಲಿ ಲಕ್ಷ್ಮಣ ಸಿಂಗ್, ಸಮಾಜಸೇವೆಯಲ್ಲಿ ಭಾಗಮಂಡಲದ ಕುದುಕುಳಿ ಭರತ್, ಮಾಧ್ಯಮ ಕ್ಷೇತ್ರದಲ್ಲಿ ಕುಯ್ಯಮುಡಿ ಸುನಿಲ್, ಶಿಕ್ಷಣ ಕ್ಷೇತ್ರದಲ್ಲಿ ಚೌರೀರ ಉದಯ, ಜನಪದ ಕ್ಷೇತ್ರದಲ್ಲಿ ತೆನೆಗುಂಡಿ ತಾನೆ, ನಾಟಿವೈದ್ಯ ಕ್ಷೇತ್ರದಲ್ಲಿ ಮರಗೋಡುವಿನ ಪರಿಚನ ಲಕ್ಷ್ಮಣ್, ಕೃಷಿ ಕ್ಷೇತ್ರದಲ್ಲಿ ಪ್ರೇಮ ಆಚಾರ್, ನೃತ್ಯ ಕ್ಷೇತ್ರದಲ್ಲಿ ಭಾರತಿ ರಮೇಶ್, ವಾದ್ಯಸಂಗೀತ ಕ್ಷೇತ್ರದಲ್ಲಿ ಮಡಿಕೇರಿಯ ಮಣಿ, ರಂಗಭೂಮಿ ಕ್ಷೇತ್ರದಲ್ಲಿ ಬಲ್ಯಮೀದೇರಿರ ಸುಬ್ರಮಣಿ, ಕಲೆ ಕ್ಷೇತ್ರದಲ್ಲಿ ಕೋಡಿ ಭರತ್, ಹಾಗೂ ಯುವಪ್ರತಿಭೆ ಸೀಮಾ ಜಾರ್ಜ್ ಅವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಡಿಕೇರಿ ಅರಣ್ಯ ವಿಭಾಗದ ಭಾಗಮಂಡಲ ವಲಯದ ಕರಿಕೆ ಗ್ರಾಮ ಅರಣ್ಯ ಸಮಿತಿ ವತಿಯಿಂದ ಪ್ರಾಥಮಿಕ ಶಾಲಾ ಮಕ್ಕಳಿಗೆ ಮನುಕುಲದ ಉಳಿವಿಗೆ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಅನಿವಾರ್ಯ ಎಂಬ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಅರಣ್ಯ ಮತ್ತು ಪರಿಸರ ವಿಷಯದ ಕುರಿತು ರಸಪ್ರಶ್ನೆ ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ವಿವಿಧ ಉಪಸಮಿತಿಯ ಪದಾಧಿಕಾರಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾ ಯಿತು. ಸಾಂಸ್ಕøತಿಕ ಕಾರ್ಯಕ್ರಮ ನೀಡಿದ ಎಲ್ಲಾ ತಂಡಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮ್ಮೇಳನಾಧ್ಯಕ್ಷೆ ಮೊಣ್ಣಂಡ ಸುಬ್ಬಯ್ಯ ವಹಿಸಿದ್ದರು. ಅರೆಭಾಷಾ ಅಕಾಡೆಮಿ ಅಧ್ಯಕ್ಷ ಜಯರಾಮ, ಜಿಲ್ಲಾ ಕಸಾಪ ಅಧ್ಯಕ್ಷ ಲೋಕೇಶ್ ಸಾಗರ್, ಕಾರ್ಯದರ್ಶಿ ದಯಾನಂದ ಹಾಗೂ ವಿವಿಧ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಬಳಿಕ ಕರಿಕೆ ಗ್ರಾಮಪಂಚಾಯಿತಿ ಅಧ್ಯಕ್ಷ ಬಾಲಚಂದ್ರನಾಯರ್ ಅಧ್ಯಕ್ಷತೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸ್ಥಳೀಯರು ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮ ತಡರಾತ್ರಿ 1.30 ವರೆಗೆ ನಡೆಯಿತು. ಜಿಲ್ಲಾಪಂಚಾಯಿತಿ ಸದಸ್ಯೆ ಕವಿತಾ ಪ್ರಭಾಕರ್ ತಾಲೂಕು ಪಂಚಾಯಿತಿ ಸದಸ್ಯೆ ಸಂಧ್ಯಾ, ಪ್ರಗತಿಪರ ಕೃಷಿಕ ಮಧುಆಚಾರ್, ಉಪಸ್ಥಿತರಿದ್ದರು.