ಶ್ರೀಮಂಗಲ, ಡಿ. 31: ಪೊನ್ನಂಪೇಟೆ ತಾಲೂಕು ಪುನರ್ ರಚನೆಗೆ ಆಗ್ರಹಿಸಿ ಪೊನ್ನಂಪೇಟೆ ಗಾಂಧಿ ಪ್ರತಿಮೆ ಎದುರು ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಅಖಿಲ ಕೊಡವ ಸಮಾಜ ಮತ್ತು ಅಖಿಲ ಅಮ್ಮ ಕೊಡವ ಸಮಾಜ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಜನರಿಗೆ ತೊಂದರೆಯಾಗುವ ವಿಚಾರದ ಬೇಡಿಕೆ ಇಟ್ಟು ಪ್ರತಿಭಟನೆ ನಡೆದಾಗ ಸರ್ಕಾರ ಸ್ಪಂದಿಸಬೇಕು. ದಕ್ಷಿಣ ಕೊಡಗಿನ ಗಡಿಭಾಗ ಹಾಗೂ ಗ್ರಾಮೀಣ ಭಾಗದ ಜನರಿಗೆ ಈಗ ಇರುವ ವೀರಾಜಪೇಟೆ ತಾಲೂಕು ಕೇಂದ್ರ ತುಂಬಾ ದೂರವಾಗುತ್ತಿದೆ. ಆದ್ದರಿಂದ ಅರ್ಹತೆ ಮತ್ತು ನ್ಯಾಯಯುತವಾಗಿರುವ ಪೊನ್ನಂಪೇಟೆ ತಾಲೂಕು ರಚನೆಗೆ ಸರ್ಕಾರ ಮುಂದಾಗಬೇಕು.

ಅಖಿಲ ಅಮ್ಮಕೊಡವ ಸಮಾಜದ ಅಧ್ಯಕ್ಷ ಬಾನಂಡ ಪ್ರಥ್ಯು ಮಾತನಾಡಿ ತಮ್ಮ ಸಮಾಜದಿಂದ ತಾಲೂಕು ರಚನೆಗೆ ಆರಂಭದಿಂದಲೇ ಬೆಂಬಲ ನೀಡುತ್ತ ಬಂದಿದೆ. ತಾಲೂಕು ರಚನೆ ಆಗುವವರೆಗೂ ಬೆಂಬಲ ನೀಡಲಿದೆ ಎಂದರು.

ಈ ಸಂದರ್ಭ ಅಖಿಲ ಕೊಡವ ಸಮಾಜದ ಪ್ರಮುಖರಾದ ಅಜ್ಜಿಕುಟ್ಟೀರ ಸುಬ್ರಮಣಿ, ನಂದೇಟಿರ ರಾಜ ಮಾದಪ್ಪ, ಕೋಟ್ರಂಗಡ ಬೋಪಯ್ಯ, ಅಡ್ಡಂಡ ಕಾರ್ಯಪ್ಪ, ಅನಿತಾ ಕಾರ್ಯಪ್ಪ, ಅಖಿಲ ಅಮ್ಮ ಕೊಡವ ಸಮಾಜದ ಅಮ್ಮತ್ತೀರ ಕೃಷ್ಣಕುಮಾರ್, ಅಮ್ಮತ್ತೀರ ರಾಜೇಶ್, ಕೊಡವ ಸಾಹಿತ್ಯ ಅಕಾಡಮಿ ಸದಸ್ಯ ಮನ್ನಕಮನೆ ಬಾಲಕೃಷ್ಣ, ಚಿ.ನಾ ಸೋಮೇಶ್, ಅಚ್ಚಿಯಂಡ ಸುನಿಲ್ ಹಾಗೂ ಪೊನ್ನಂಪೇಟೆ ಹಿರಿಯ ನಾಗರಿಕ ವೇದಿಕೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.