ಕುಶಾಲನಗರ, ಡಿ. 31: ಕುಶಾಲನಗರವನ್ನು ಕೇಂದ್ರವಾಗಿಸಿ ನೂತನ ತಾಲೂಕು ರಚನೆಗೆ ಆಗ್ರಹಿಸಿ ಕುಶಾಲನಗರದಲ್ಲಿ ನಡೆಯುತ್ತಿರುವ ಸರಣಿ ಧರಣಿ ಕಾರ್ಯಕ್ರಮದಲ್ಲಿ ಭಾನುವಾರ ಭಾರತ ಕಮ್ಯುನಿಸ್ಟ್ (ಮಾಕ್ರ್ಸ್‍ವಾದಿ) ಪಕ್ಷ ಪದಾಧಿಕಾರಿಗಳು ಮತ್ತು ಹೆಬ್ಬಾಲೆ ಸ್ಥಾನೀಯ ಸಮಿತಿ ಪದಾಧಿಕಾರಿಗಳು ಧರಣಿ ನಡೆಸಿದರು.
ಪಟ್ಟಣದ ಕಾರು ನಿಲ್ದಾಣದ ಆವರಣದ ಗುಂಡುರಾವ್ ಸತ್ಯಾಗ್ರಹ ವೇದಿಕೆಯಲ್ಲಿ ನಡೆದ ಧರಣಿ ಸಂದರ್ಭ ಸಮಿತಿ ಪದಾಧಿಕಾರಿಗಳು, ಸದಸ್ಯರು ನೂತನ ತಾಲೂಕು ರಚನೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಮಧ್ಯಾಹ್ನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ರಚಿಸಿದರು.
ಭಾರತೀಯ ಕಮ್ಯುನಿಸ್ಟ್ ಪಾರ್ಟಿ ಜಿಲ್ಲಾ ಘಟಕದ ಪ್ರಮುಖರಾದ ಡಾ. ಐ.ಆರ್. ದುರ್ಗಾಪ್ರಸಾದ್, ಪಿ.ಎಂ. ಭರತ್, ಎನ್.ಡಿ. ಕುಟ್ಟಪ್ಪನ್, ಮಹದೇವ್, ಹೆಚ್.ಪಿ. ರಮೇಶ್, ಜೋಸ್, ಗಣೇಶ್, ಚಂದನ್, ಹೆಬ್ಬಾಲೆಯ ಪುಟ್ಟೇಗೌಡ, ಹೆಚ್.ಹೆಚ್. ಧನಂಜಯ, ಕಾವೇರಿ ತಾಲೂಕು ರಚನಾ ಹೋರಾಟ ಕೇಂದ್ರ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮತ್ತಿತರರು ಇದ್ದರು.
ಉಪವಾಸ ಸತ್ಯಾಗ್ರಹ: ತಾಲೂಕು ರಚನೆಗೆ ಒತ್ತಾಯಿಸಿ ಕಾವೇರಿ ತಾಲೂಕು ಹೋರಾಟ ಸಮಿತಿಯ ಸಂಚಾಲಕರಾದ ವಿ.ಪಿ. ಶಶಿಧರ್ ನೇತೃತ್ವದಲ್ಲಿ ತಾ. 1 ರಿಂದ (ಇಂದಿನಿಂದ) ಅನಿರ್ಧಿಷ್ಟ ಕಾಲ ಉಪವಾಸ ಸತ್ಯಾಗ್ರಹ ಹೂಡಲು ನಿರ್ಧರಿಸಲಾಗಿದೆ. ಕುಶಾಲನಗರದ ಕನ್ನಿಕಾ ಇಂಟರ್‍ನ್ಯಾಷನಲ್ ಸಭಾಂಗಣದಲ್ಲಿ ನಡೆದ ಸ್ಥಾನೀಯ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.