ಮಡಿಕೇರಿ, ಡಿ. 30: ತಿಂಗಳುಗಳ ಹಿಂದೆ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಿಂದ ಮೈಸೂರು ಹೊರವಲಯದ ಕೊಲಂಬಿಯಾ ಆಸ್ಪತ್ರೆ ತನಕ ಹೆದ್ದಾರಿ ಅಭಿವೃದ್ಧಿಗೆ ಸಮೀಕ್ಷೆ ನಡೆಸಲಾಗಿತ್ತು. ಇದೀಗ ಮಡಿಕೇರಿಯಿಂದ ಸಂಪಾಜೆಯ ತನಕ ಅಂದಾಜು 22 ಕಿ.ಮೀ. ರಸ್ತೆಯ ಅಭಿವೃದ್ಧಿಗೆ ಪ್ರತ್ಯೇಕ ಸಮೀಕ್ಷೆ ನಡೆಸಲಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಮಂಗಳೂರು ವಿಭಾಗಕ್ಕೆ ಒಳಪಟ್ಟಿರುವ ಸಕಲೇಶಪುರ ಉಪವಿಭಾಗದ ಕಾರ್ಯಪಾಲಕ ಅಭಿಯಂತರ ರಮೇಶ್ ನೇತೃತ್ವದಲ್ಲಿ ಈ ಮಾರ್ಗದ ಸರ್ವೆ ನಡೆಸ ಲಾಗುತ್ತಿದ್ದು, ಇರುವ ಹೆದ್ದಾರಿಯನ್ನೇ ಮೇಲ್ದರ್ಜೆಗೆ ಗುಣಮಟ್ಟದಿಂದ ಅಭಿವೃದ್ಧಿ ಕೈಗೊಳ್ಳಲಾಗುವದು ಎಂದು ಅವರು ತಿಳಿಸಿದ್ದಾರೆ.
ಕೊಡಗು ಜಿಲ್ಲೆಯ ಮಟ್ಟಿಗೆ ಇತರ ಜಿಲ್ಲೆಯ ಹೆದ್ದಾರಿಗಳಂತೆ ಭಾರೀ ವಾಹನಗಳ ಓಡಾಟ ಹಾಗೂ ಒತ್ತಡ ಇಲ್ಲದಿರುವ ಕಾರಣ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಇಲ್ಲಿ ಇರುವ ರಸ್ತೆಗಳನ್ನು ಮೇಲ್ದರ್ಜೆಗೆ ಕೊಂಡೊಯ್ಯಲಾಗುವದು ಎಂದು ಖಚಿತಪಡಿಸಿರುವ ಅವರು, ಚತುಷ್ಪದ ಮಾರ್ಗದ ಯೋಜನೆ ಸದ್ಯಕ್ಕಿಲ್ಲವೆಂದು ‘ಶಕ್ತಿ’ಯೊಂದಿಗೆ ದೃಢಪಡಿಸಿದ್ದಾರೆ.
ಕೊಡಗಿನ ಅರಣ್ಯ ಪರಿಸರ, ಬೆಟ್ಟ ಪ್ರದೇಶವನ್ನು ಗಮನದಲ್ಲಿ ಇರಿಸಿಕೊಂಡು, ಇರುವ ರಸ್ತೆಗಳನ್ನು ಗುಣಮಟ್ಟದೊಂದಿಗೆ ಸಂಚಾರ ಯೋಗ್ಯ ರೀತಿಯಲ್ಲಿ ಅಭಿವೃದ್ಧಿಗೊಳಿಸುವ ಉದ್ದೇಶದಿಂದ ಸರ್ವೆ ಕೆಲಸ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.