ಗೋಣಿಕೊಪ್ಪಲು, ಡಿ. 30: ಇತ್ತೀಚೆಗೆ ಗೋಣಿಕೊಪ್ಪಲಿನ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ಪೋಷಕ-ಅಧ್ಯಾಪಕರ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾವೇರಿ ವಿದ್ಯಾಸಂಸ್ಥೆ ಪ್ರಾರಂಭವಾಗಿ 50ವರ್ಷಗಳನ್ನು ಪೂರೈಸಿ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಿಸಲಾಯಿತು. ಈ ಸಭೆಯಲ್ಲಿ ಕಾಲೇಜು ಬೆಳೆದುಬಂದ ದಾರಿ ಮತ್ತು ಕಾಲೇಜಿನಲ್ಲಿ ನಡೆದಂತಹ ಅನೇಕ ಕಾರ್ಯಕ್ರಮಗಳನ್ನು ಪ್ರತಿಬಿಂಬಿಸುವ ಛಾಯಾಚಿತ್ರಗಳನ್ನು ಪವರ್‍ಪಾಯಿಂಟ್ ಮೂಲಕ ಪ್ರದರ್ಶಿಸಿ ಪೋಷಕರಿಗೆ ಮನವರಿಕೆ ಮಾಡಿಕೊಡಲಾಯಿತು. ಜೊತೆಗೆ ಪೋಷಕರಿಗೆ ಮನರಂಜನೆ ನೀಡುವ ಸಲುವಾಗಿ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನೀಡಲಾಯಿತು.

ಸೇಂಟ್ ಥಾಮಸ್ ಕಾಲೇಜಿನ ಮುಖ್ಯಸ್ಥರಾದ ರೆವರೆಂಡ್ ಫಾದರ್ ಜಾರ್ಜ್ ಅವರು ಮುಖ್ಯ ಅತಿಥಿಗಳಾಗಿ “ಪೋಷಕರು ವಿದ್ಯಾರ್ಥಿಗಳ ನಡೆ, ಶಿಸ್ತು, ಓದು ಮತ್ತು ಇತರೆ ಚಟುವಟಿಕೆ ಗಳ ಬಗ್ಗೆ ಸದಾ ನಿಗಾವಹಿಸುವದರ ಮೂಲಕ ಶಿಕ್ಷಕರಿಗೆ ಪ್ರತಿಸ್ಪಂದಿಸಬೇಕು” ಎಂದು ಕರೆ ನೀಡಿದರು.

ಗೋಣಿಕೊಪ್ಪಲು ಹೈಸ್ಕೂಲ್‍ನ ವಿಜ್ಞಾನ ಶಿಕ್ಷಕರಾದ ಕೃಷ್ಣಚೈತನ್ಯ ಅವರು “ವಿದ್ಯಾರ್ಥಿಗಳ ಉನ್ನತಿಗೆ ಮನೆಯ ಪರಿಸರ ಮುಖ್ಯ. ಮನೆಯಲ್ಲಿ ಪೋಷಕರು ವಿದ್ಯಾರ್ಥಿಗಳ ಸನಿಹದಲ್ಲಿದ್ದು ಭಾವನಾತ್ಮಕ ಸಂಬಂಧವಿರಿಸಿಕೊಳ್ಳಬೇಕು. ಮುಖ್ಯವಾಗಿ ಮೊಬೈಲ್ ಬಳಕೆಯ ಮೇಲೆ ನಿಗಾ ಇಡಬೇಕು” ಎಂದು ಸಲಹೆ ನೀಡಿದರು.

ಪೋಷಕರ ಪರವಾಗಿ ಡಾ.ಎಸ್.ಎನ್. ಬೀನಾ “ಕಾವೇರಿ ಪದವಿಪೂರ್ವ ಕಾಲೇಜು ಕೊಡಗಿನಲ್ಲಿಯೇ ಉತ್ತಮ ಸ್ಥಾನದಲ್ಲಿದೆ. ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಹೊಂದಿದೆ. ಅತ್ಯುತ್ತಮ ಪುಸ್ತಕಗಳ ಸಂಗ್ರಹವನ್ನು ಹೊಂದಿರುವ ಗ್ರಂಥಾಲಯವು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅನುಕೂಲವಾಗಿದೆ” ಎಂದು ನುಡಿದರು.

ಉಪನ್ಯಾಸಕರಾದ ಪಿ.ವಿ.ಲೋಕೇಶ್ “ಕಾವೇರಿ ಪದವಿಪೂರ್ವ ಕಾಲೇಜು ಕೊಡಗಿನಲ್ಲಿಯೇ ಅತ್ಯಂತ ಹಳೆಯ ಕಾಲೇಜಾಗಿದ್ದು, ನಮ್ಮ ಪೂರ್ವಜರು ಕೂಡ ಇಲ್ಲಿಯೇ ವಿದ್ಯಾರ್ಜನೆ ಮಾಡಿದ್ದಾರೆ ಎಂದು ಸ್ಮರಿಸಿದರು.

ಕಾವೇರಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಡಾ|| ಎ.ಸಿ.ಗಣಪತಿ ಅವರು ಮಾತನಾಡಿ, ಕಾವೇರಿ ವಿದ್ಯಾಸಂಸ್ಥೆ ಹಾಗೂ ಕಾವೇರಿ ಪದವಿಪೂರ್ವ ಕಾಲೇಜು ತಮ್ಮೆಲ್ಲರ ಸಹಕಾರದಿಂದ ಉತ್ತಮ ವಿದ್ಯಾಸಂಸ್ಥೆಯಾಗಿ ಬೆಳೆದು 2018ರಲ್ಲಿ ಸುವರ್ಣ ಮಹೋತ್ಸವದ ಹೊಸ್ತಿಲಿನಲ್ಲಿದೆ. ಈ ಸಂದರ್ಭದಲ್ಲಿ ಸುವರ್ಣ ಮಹೋತ್ಸವದ ಆಚರಣೆಗೆ ಎಲ್ಲರನ್ನು ಆಹ್ವಾನಿಸಿದರು.

ಪೋಷಕ-ಅಧ್ಯಾಪಕರ ಸಂಘದ ಕಾರ್ಯದರ್ಶಿ ಪೂವಯ್ಯ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕರಾದ ಪದ್ಮ ಎಂ.ಕೆ. ಸ್ವಾಗತಿಸಿದರೆ, ಪ್ರಾಂಶುಪಾಲರಾದ ಎಸ್.ಎಸ್. ಮಾದಯ್ಯ ವಂದಿಸಿದರು. ಪೋಷಕ -ಅಧ್ಯಾಪಕ ಸಂಘದ ಸಂಚಾಲಕಿ ಪೂವಮ್ಮ ಎಂ.ಬಿ. ಕಾರ್ಯಕ್ರಮವನ್ನು ಸಂಘಟಿಸಿದ್ದರು.