ಮಡಿಕೇರಿ, ಡಿ. 30: ಜಿಲ್ಲಾ ಕಾಂಗ್ರೆಸ್ ಸಮಿತಿಯ ಯುವ ಘಟಕದ ವತಿಯಿಂದ ಕೊಟ್ಟಮುಡಿಯಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ನಡೆಯಿತು.

ಕಾಂಗ್ರೆಸ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಫಿ ಕೊಟ್ಟಮುಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಮಹತ್ವದ ಪಾತ್ರ ವಹಿಸಿತ್ತು ಎಂದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ರಚನೆಗೊಂಡು 133 ವರ್ಷಗÀಳಾಗಿದ್ದು, ಬ್ರಿಟೀಷರ ವಿರುದ್ಧ ಹೋರಾಡಿ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರ ವಹಿಸಿದೆ. ಸ್ವಾತಂತ್ರ್ಯದ ಬಳಿಕವೂ ಆಧುನಿಕ ಭಾರತವನ್ನು ಕಟ್ಟುವಲ್ಲಿ ಸಾಕಷ್ಟು ಶ್ರಮ ವಹಿಸಿದೆ. ಭಾರತ ದೇಶವನ್ನು ಜಾತ್ಯತೀತ, ಪ್ರಗತಿಪರ ರಾಷ್ಟ್ರವನ್ನಾಗಿ ಮಾಡುವಲ್ಲಿ ಸುದೀರ್ಘ ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವದ ರಕ್ಷಣೆಯೊಂದಿಗೆ, ದೀನದಲಿತರ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ, ಬಡವರ ಏಳಿಗೆಗಾಗಿ ಶ್ರಮಿಸಿದೆ ಎಂದು ಹೇಳಿದರು.

ಯುವ ಕಾಂಗ್ರೆಸ್ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಈ ಸಂದರ್ಭ ಸಿಹಿ ಹಂಚಿ ಸಂಭ್ರಮಿಸಿದರು.