ಗೋಣಿಕೊಪ್ಪಲು, ಡಿ. 30: ಜಿಲ್ಲೆಯು ಗುಡ್ಡಗಾಡು ಪ್ರದೇಶವಾದ ಕಾರಣ ಜಿಲ್ಲೆಯಲ್ಲಿ ಮೊದಲ ಬಾರಿಗೆ ಬೆಳಕಿನ ಭಾಗ್ಯ ಎಂಬ ಯೋಜನೆಯಲ್ಲಿ ಕತ್ತಲಿನಿಂದ ಬೆಳಕಿನಡೆಗೆ ವಿನೂತನ ಕಾರ್ಯಕ್ರಮ ನಡೆಯುತ್ತಿದ್ದು, ಮೊದಲ ಹಂತದಲ್ಲಿ 1500 ಫಲಾನುಭವಿಗಳಿಗೆ ಈ ಯೋಜನೆ ತಲಪಲಿದೆ. ವೀರಾಜಪೇಟೆ ತಾಲೂಕಿನ 20 ಪಂಚಾಯಿತಿಗಳ ಫಲಾನುಭವಿಗಳಿಗೆ ಇದರ ಪ್ರಯೋಜನ ಈಗಾಗಲೇ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ಅರಣ್ಯ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ತಿಳಿಸಿದರು.
ವೀರಾಜಪೇಟೆ ತಾಲೂಕಿನ ಬಾಳೆಲೆ ಗ್ರಾಮ ಪಂಚಾಯಿತಿಯಲ್ಲಿ ಆಯೋಜನೆಗೊಂಡಿದ್ದ ಕಾರ್ಯ ಕ್ರಮದಲ್ಲಿ 25 ಫಲಾನುಭವಿಗಳಿಗೆ ಸೋಲಾರ್ ದೀಪವನ್ನು ವಿತರಿಸಿ ಮಾತನಾಡಿದ ಪದ್ಮಿನಿ ಪೊನ್ನಪ್ಪ, ಹಾಡಿಗಳಲ್ಲಿ ವಿದ್ಯುತ್ ಸೌಕರ್ಯ ವಿಲ್ಲದೆ ಗಿರಿಜನರು ತೊಂದರೆ ಯಲ್ಲಿದ್ದರು ತಮ್ಮ ಮೊಬೈಲ್‍ಅನ್ನು ಚಾರ್ಜ್ ಮಾಡಿಕೊಳ್ಳಲು ಸಮೀಪದ ಅಂಗಡಿಯೊಂದಿಗೆ ದಿನನಿತ್ಯ ರೂ. 10 ನೀಡುತ್ತಿದ್ದರು. ಇದೀಗ ಈ ಬೆಳಕಿನ ಭಾಗ್ಯ ಯೋಜನೆಯಲ್ಲಿ ಮೊಬೈಲ್ ಚಾರ್ಜರ್ ಮಾಡಿ ಕೊಳ್ಳುವ ಅವಕಾಶವಿರುವದರಿಂದ ಇದೀಗ ಈ ಕಷ್ಟ ದೂರವಾಗಿದೆ. ಯೋಜನೆ ಬಡವರಿಗೆ ತಲಪಿರುವದರಿಂದ ಫಲಾನುಭವಿಯ ಮೊಗದಲ್ಲಿ ಹರ್ಷ ಮೂಡಿದೆ ಎಂದರು.
ಕಾರ್ಯಕ್ರಮದಲ್ಲಿ ಹೋಬಳಿ ಕಾಂಗ್ರೆಸ್‍ನ ಅಧ್ಯಕ್ಷ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆದೇಂಗಡ ವಿನು ಉತ್ತಪ್ಪ ಮಾತನಾಡಿ, ಬೆಳಕಿನ ದೀಪಗಳನ್ನು ಅರ್ಹರಿಗೆ ಮಾತ್ರ ನೀಡಬೇಕು. ಕಾಡಿನ ಹಂಚಿನಲ್ಲಿ ಬಡ ಜನತೆ ಬೆಳಕಿಲ್ಲದೆ ನರಳುತ್ತಿರುವ ಕಷ್ಟ ಹತ್ತಿರದಿಂದ ನೋಡಿದ್ದೇನೆ. ಈ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯುತ್ತಿರುವದು ಒಳ್ಳೆಯ ಬೆಳವಣಿಗೆ ಎಂದರು.
ಬಾಳೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಸುಮಾ ಶೇಖರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ಬಾನಂಡ ಪ್ರಥ್ಯು, ತಾ.ಪಂ. ಸದಸ್ಯೆ ಅಶಾ ಜೇಮ್ಸ್, ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷೆ ತಾರಾ ಅಯ್ಯಮ್ಮ ಗ್ರಾಂ.ಪಂ. ಉಪಾಧ್ಯಕ್ಷ ರಂಜನ್ ಕಾಂಗ್ರೆಸಿನ ಮುಖಂಡರಾದ ಕೇಶವ್ ಮೂರ್ತಿ ಮಾಂಗೇರ ಪೊನ್ನಪ್ಪ, ಸಂಪತ್ ಸೋಮಣ್ಣ, ಗೀತಾ ನಂಜಪ್ಪ, ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಉಪಾಧ್ಯಕ್ಷ ರಂಜನ್ ಸ್ವಾಗತಿಸಿದರು. ಪಿ.ಡಿ.ಓ. ಶ್ರೀನಿವಾಸ್ ವಂದಿಸಿದರು.