ಮಡಿಕೇರಿ, ಡಿ. 30: 2017ನೇ ಇಸವಿಯ ಕೊನೆಯ ದಿನ ಎದುರಾಗಿಯೇ ಬಿಟ್ಟಿದೆ. ಡಿಸೆಂಬರ್ 31ರಂದು (ಇಂದು) ರಾತ್ರಿ ಈ ವರ್ಷಕ್ಕೆ ವಿದಾಯ ಹೇಳುವದರೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಲು ಜನತೆ ಅದರಲ್ಲೂ ಯುವ ಸಮೂಹ ಕಾತರದಿಂದಿದೆ. ಹೊಸ ವರ್ಷದ ಸ್ವಾಗತದ ಹೆಸರಿನಲ್ಲಿ ಬಗೆ ಬಗೆಯ ಕಾರ್ಯಕ್ರಮಗಳು, ಔತಣ ಕೂಟಗಳು, ಡಿ.ಜೆ. ಸಂಗೀತ, ಬಾಲಿವುಡ್ ಡ್ಯಾನ್ಸ್ನಂತಹ ಹತ್ತು ಹಲವಾರು ಕಾರ್ಯಕ್ರಮಗಳು ಕೊಡಗು ಜಿಲ್ಲೆಯ ವಿವಿಧೆಡೆಗಳಲ್ಲಿ ಆಯೋಜಿತಗೊಂಡಿವೆ. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಇಡೀ ಕೊಡಗು ಜಿಲ್ಲೆ ಪ್ರವಾಸಿಗರಿಂದ, ವಾಹನಗಳಿಂದ ತುಂಬಿ ಹೋಗಿವೆ. ಎಲ್ಲಾ ರೆಸಾರ್ಟ್ಗಳು, ಹೋಂಸ್ಟೇ, ವಸತಿ ಗೃಹಗಳು ಈಗಾಗಲೇ ಭರ್ತಿಯಾಗಿವೆ. ಹೊಸ ವರ್ಷದ ಆಗಮನಕ್ಕೆ ಮುಂಚಿತವಾಗಿ ಕಳೆದ ವಾರದಿಂದ ಕ್ರಿಸ್ಮಸ್ ಬಳಿಕದಿಂದಲೇ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಜಿಲ್ಲೆಯಲ್ಲಿ ಬೀಡು ಬಿಟ್ಟಿದ್ದಾರೆ. ವಾಹನ ದಟ್ಟಣೆಯಿಂದಾಗಿ ಟ್ರಾಫಿಕ್ನ ಕಿರಿಕಿರಿಗೆ ಸ್ಥಳೀಯ ಮಂದಿ ಹಿಡಿಶಾಪ ಹಾಕುವಂತಾಗಿದ್ದರೂ, ಪ್ರವಾಸಿಗರ ಕೊಡಗು ಪ್ರೇಮವನ್ನು ಏನೂ ಮಾಡುವಂತಿಲ್ಲ. ಪ್ರವಾಸಿಗರು ಕೊಡಗಿನಲ್ಲಿ ಹೊಸ ವರ್ಷಾಚರಣೆಯನ್ನು ಸಕತ್ತಾಗಿಯೇ ‘ಎಂಜಾಯ್’ ಮಾಡುವ ತರಾತರಿಯಲ್ಲಿದ್ದಾರೆ. ಪ್ರವಾಸಿಗರು ಮಾತ್ರವಲ್ಲದೆ, ಜಿಲ್ಲೆಯ ಜನತೆಯೂ ಹೊಸ ವರ್ಷಾಚರಣೆಗೆ ತಮ್ಮದೇ ಸಿದ್ಧತೆ ಮಾಡಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ಇಲಾಖೆ ಈಗಾಗಲೇ ಹೊಸ ವರ್ಷಾಚರಣೆಯ ಪಾರ್ಟಿಗಳಿಗೆ ಕೆಲವೊಂದು ಕಡಿವಾಣ, ನಿಯಮಗಳನ್ನು ಪ್ರಕಟಿಸಿದ್ದು, ಹೊಸ ವರ್ಷದ ಸಂಭ್ರಮ ಸುಸೂತ್ರವಾಗಿ ನಡೆಯಲಿ ಎಂಬದು ಎಲ್ಲರ ಆಶಯ.