ವಿದೇಶೀ ಆಕ್ರಮಣದಿಂದಾಗಿ, ಆಂಗ್ಲ ಭಾಷೆಗಳ ಓಲೈಕೆಯಿಂದಾಗಿ, ಇತರ ದೇಶಗಳು, ರಾಜ್ಯಗಳು ನಮ್ಮವರನ್ನು ಧನದ ಆಮಿಷಕ್ಕೆ ಸೆಳೆಯುತ್ತಿರುವದರಿಂದಾಗಿ ಕನ್ನಡದ ಬಯಕೆ ನಮ್ಮವರಲ್ಲಿ ಕಡಿಮೆಯಾಗಿದೆ ಎಂದು ಸಮ್ಮೇಳನಾಧ್ಯಕ್ಷೆ ಮೊಣ್ಣಂಡ ಶೋಭಾ ಸುಬ್ಬಯ್ಯ ಆತಂಕ ವ್ಯಕ್ತಪಡಿಸಿದರು.ವಿದ್ಯಾಭ್ಯಾಸದ ಪ್ರವಿಣ್ಯತೆಯನ್ನು ಅಳೆಯುವ ಮಟ್ಟಗೋಲು ಆಂಗ್ಲ ಭಾಷೆಯಾಗಿದೆ. ಎಲ್ಲಿ ನೋಡಿದರೂ ಕನ್ನಡ ಭಾಷೆಯ ಅರಿವಿಲ್ಲದವರ ಸಂಖ್ಯೆ ಏರುತ್ತಿದೆ. ಕನ್ನಡವನ್ನು ಕೇವಲ ಹಲವು ವರ್ಷ ಓದುವ ನಮ್ಮ ಮಕ್ಕಳು, ಕನ್ನಡ ಪಠ್ಯಪುಸ್ತಕದಲ್ಲಿ ಆಂಗ್ಲ ಭಾಷೆಯಲ್ಲಿ ಟಿಪ್ಪಣಿ ಬರೆದು ಕನ್ನಡ ಕಲಿಯುತ್ತಾರೆ-ಕೇವಲ ಉತ್ತೀರ್ಣರಾಗಲು! ಕನ್ನಡ ಪ್ರಾಧ್ಯಾಪಕರ ಉಚ್ಛಾರಣೆಯಲ್ಲಿ ಶುದ್ಧತೆ, ವಿದ್ವತ್ತು ಕಡಿಮೆಯಾಗಿದೆ. ಅನುಕರಣೆಯಿಂದಾಗಿ ನಮ್ಮತನ ಕಳೆದು ಹೋಗುತ್ತಿದೆ. ಭಾಷಾ ಸ್ಪಷ್ಟತೆ ಸೋತಿದೆ ಎಂದು ವಿಷಾದಿಸಿದರು.

ಇತ್ತೀಚೆಗೆ ಕವಿತೆ, ಕಾದಂಬರಿಗಳ ಬರವಣಿಗೆಗಳಲ್ಲೂ ಗುಣಮಟ್ಟವಿಲ್ಲದ ಬರವಣಿಗೆಗಳು ಕಾಣಬರುತ್ತಿವೆ. ಪ್ರಯತ್ನ ಕಡಿಮೆ, ಸಾಧನೆ ಕಡಿಮೆ. ಓದುವಿಕೆ ಕಡಿಮೆ, ನಿಧಿದ್ಯಾಸನ ಕಡಿಮೆಯಾಗುತ್ತಿದೆ. ಬರವಣಿಗೆ ಒಂದು ಯೋಗ. ಬರೆಯುವವನ ಮನಸ್ಸು, ಮೂಡಿ ಬಂದ ಭಾವನೆ, ಅದರಿಂದ ಸಮಾಜಕ್ಕಾಗುವ ಪ್ರಯೋಜನ ಇವುಗಳ ಸಂಬಂಧ ಎಂದು ಶೋಭಾ ವಿಶ್ಲೇಷಿಸಿದರು.

ಇಂದು ಪರರ ಬರಹಗಳನ್ನು, ಭಾವನೆಗಳನ್ನು ಸ್ವಲ್ಪ ಹೊಂದಿಸಿ, ತಮ್ಮ ಹೆಸರಿನಲ್ಲಿ

(ಮೊದಲ ಪುಟದಿಂದ) ಪ್ರಕಟಿಸುವದು ವಾಡಿಕೆಯಾಗಿದೆ. ಸ್ವಂತಿಕೆಯನ್ನು ಕವಿಮನ ಮರೆತಂತಿದೆ. ಕಲಿಕೆ ಒಂದು ಕಲ್ಲಿದ್ದಂತೆ. ಸಂಸ್ಕøತಿ ಆ ಕಲಿಕೆಯ ಹೊಳಪು. ಕಲಿಕೆಗೆ ತೂಕವಿದೆ, ಪದವಿ ಇದೆ. ಪದವಿಯಿಂದ ಬರುವ ನೌಕರಿಗೆ ಮಾತ್ರ ಬೆಲೆ ಕೊಡದೆ, ಕಲಿಕಾ ಸಂಸ್ಕøತಿಗೆ ಬೆಲೆ ಕೊಡಬೇಕಾಗಿದೆ. ಸಂಸ್ಕøತಿ ಕಲಿಕೆಯನ್ನು ಹೊಳೆಯುವಂತೆ ಮಾಡುತ್ತದೆ ಎಂದರು.

ಕರ್ನಾಟಕದಲ್ಲಿ, ಕನ್ನಡಮ್ಮನ ಮಡಲಲ್ಲಿ, ಕನ್ನಡ, ತಮಿಳು, ತೆಲುಗು, ಮಲೆಯಾಳ, ಕೊಂಕಣಿ, ಬ್ಯಾರಿ, ಕೊಡವ, ಅರೆಭಾಷೆಗಳೂ ತಂತಮ್ಮ ಸ್ಥಾನಮಾನಗಳನ್ನು ಕಂಡುಕೊಂಡಿವೆ. ಇಂದು ಈ ಎಲ್ಲಾ ಭಾಷೆಗಳ ಜನರೂ ನಿಂತ ನೆಲ ಕನ್ನಡ ನೆಲ ಎಂದು ಸಮ್ಮೇಳನಾಧ್ಯಕ್ಷರು ನೆನಪಿಸಿದರು.

ಕನ್ನಡದ ಮೇಲಿನ ಪ್ರೀತಿ ಅನ್ಯ ಭಾಷೆಗಳ ಮೇಲಿನ ದ್ವೇಷ ಆಗಬಾರದು. ಭಾರತವು ಸರ್ವ ಜನಾಂಗಗಳ ಶಾಂತಿಯ ತೋಟ. ಬಗೆ ಬಗೆಯ ಪುಷ್ಪಗಳ ಸಮಾಗಮವು ಕನ್ನಡಮ್ಮನ ಬೃಂದಾವನಕ್ಕೇ ಸೌಂದರ್ಯವನ್ನೀಯಲಿ ಎಂದು ಆಶಿಸಿದರು.

ವನ್ಯ ಪ್ರಾಣಿಗಳ ಅಟ್ಟಹಾಸ ಇಂದು ಪಟ್ಟಣಗಳಲ್ಲಿ ತಲೆದೋರುತ್ತಿದೆ. ಸತ್ತವರಿಗೆ ನಾನೊಂದು ಲಕ್ಷ, ಮತ್ತೊಬ್ಬರು ಒಂದು ಲಕ್ಷ ಕೊಡುವಾಗ ಜೀವ ಹಿಂಬರುವದೇ? ಇದಕ್ಕೆ ಪರಿಹಾರ ಹುಡುಕಬೇಕು. ಕಾಡುಗಳನ್ನು ಉಳಿಸಬೇಕು. ಹಿಂದೆ ಆಂಗ್ಲರು ತಾವೇ ಈ ನೆಲವನ್ನು ಮುಂದಕ್ಕೂ ಆಳುವೆವೆಂಬ ಭರವಸೆಯ ಮೇಲೆ, ದೇವರ ಕಾಡುಗಳನ್ನೂ, ರಕ್ಷಿತ ಅರಣ್ಯಗಳನ್ನೂ ಸಂರಕ್ಷಿಸಿದ್ದರು. ಬೇಟೆ, ಒಂದು ಆಟವಾಗಿತ್ತು. ಅಷ್ಟೇ ಪ್ರಾಣಿಗಳೂ ಇದ್ದವು. ಅವುಗಳಿಗೆ ಆಯಾ ಜಾತಿಯ ಮೃಗಕ್ಕೆ ತಕ್ಕಂತೆ ಸೃಷ್ಟಿಯ ನಿಯಮದಂತೆ ವನದಲ್ಲೇ ಅವುಗಳಿಗಿರುವ ಭಕ್ಷ್ಯಗಳಿದ್ದವು. ಇಂದು ಮಾನವನ ಆಸೆಗೆ ಅಂತ್ಯವಿಲ್ಲದಾಗಿ ಮರಗಳನ್ನು ಬೇಕಾಬಿಟ್ಟಿ ಕಡಿದು ನೀರ್ಕುಡಿಯುತ್ತಿದ್ದಾರೆ. ಇದು ದಂಧೆಯಾಗಿದೆ. ಇದಕ್ಕೆ ಕಡಿವಾಣವಿಲ್ಲವೇ? ಇದರಿಂದಾಗಿ ಪಾಪದ ಪ್ರಾಣಿಗಳು ಪಟ್ಟಣ ಪ್ರವೇಶಿಸಿದರೆ, ಅವರ ತಪ್ಪೇನು? ಎಂದು ಶೋಭಾ ಸುಬ್ಬಯ್ಯ ಪ್ರಶ್ನಿಸಿದರು.