ಮಡಿಕೇರಿ, ಡಿ.30 : ಇತ್ತೀಚಿನ ದಿನಗಳಲ್ಲಿ ದಲಿತರು ಹಾಗೂ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಮಿತಿ ಮೀರುತ್ತಿದೆ ಎಂದು ಆರೋಪಿಸಿರುವ ಸಮಾನ ಮನಸ್ಕರ ವೇದಿಕೆ ಜ.6 ರಂದು ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲು ನಿರ್ಧರಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷರಾದ ಪ್ರೇಮ್ ಕುಮಾರ್ ವಿಜಯಪುರದಲ್ಲಿ ನಡೆದ ಬಾಲಕಿ ದಾನೇಶ್ವರಿ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನು ಖಂಡಿಸಿದರು. ದಲಿತರು ಹಾಗೂ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ಖಂಡಿಸಿ ಜ.6ರಂದು ನಗರದ ಕಾರ್ಯಪ್ಪ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ಗಾಂಧಿ ಮೈದಾನದಲ್ಲಿ ಸಮಾವೇಶ ನಡೆಸಲು ನಿರ್ಧರಿಸಿರುವದಾಗಿ ತಿಳಿಸಿದರು.
ಕೋಮುವಾದವನ್ನು ಹತ್ತಿಕ್ಕುವದು, ಅಲ್ಪಸಂಖ್ಯಾತರು ಮತ್ತು ದಲಿತರ ಮೇಲಿನ ದೌರ್ಜನ್ಯದ ವಿರುದ್ಧ ಜನಜಾಗೃತಿ ಮೂಡಿಸುವದು ಹಾಗೂ ಕೊಡಗಿನ ವಿವಿಧೆಡೆ ನಡೆದಿರುವ ದಲಿತರ ಮೇಲಿನ ದೌರ್ಜನ್ಯದ ವಿರುದ್ಧ ಪ್ರತಿಭಟನಾ ಸಮಾವೇಶದಲ್ಲಿ ಧ್ವನಿ ಎತ್ತಲಾಗುವದೆಂದರು.
ಶಾಂತಿ, ಸೌಹಾರ್ದತೆಗೆ ಹೆಸರಾಗಿರುವ ಕೊಡಗು ಜಿಲ್ಲೆಯಲ್ಲಿ ಕೂಡ ಜಾತಿಯ ವಿಷ ಬೀಜ ಭಿತ್ತಿ ಅಶಾಂತಿ ಮೂಡಿಸಲು ಕೆಲವರು ಯತ್ನಿಸುತ್ತಿದ್ದಾರೆ. ಆದ್ದರಿಂದ ಸಮಾಜದಲ್ಲಿ ಒಗ್ಗಟ್ಟನ್ನು ಮೂಡಿಸುವ ಸಲುವಾಗಿ ಸಮಾನ ಮನಸ್ಕರ ವೇದಿಕೆ ವತಿಯಿಂದ ಜಾಗೃತಿ ಸಭೆ ನಡೆಸುತ್ತಿರುವದಾಗಿ ಪ್ರೇಮ್ ಕುಮಾರ್ ಸ್ಪಷ್ಟಪಡಿಸಿದರು.
ವಕ್ತಾರ ಅಮೀನ್ ಮೊಹಿಸಿನ್ ಮಾತನಾಡಿ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಅವರು ಸಂವಿಧಾನವನ್ನು ಬದಲಾಯಿಸುವ ಹೇಳಿಕೆ ನೀಡಿರುವದು ಭಯಾನಕ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ದುರಂತವಾಗಿದ್ದು, ಇದನ್ನು ತೀವ್ರವಾಗಿ ಖಂಡಿಸುವದಾಗಿ ತಿಳಿಸಿದರು.
ದಲಿತರು ಹಾಗೂ ಅಲ್ಪಸಂಖ್ಯಾತರ ಮೇಲೆ ಸಮಾನ ರೀತಿಯ ದೌರ್ಜನ್ಯಗಳು ನಡೆಯು ತ್ತಿದ್ದು, ದಲಿತ ಯುವತಿ ದಾನಮ್ಮ ಹತ್ಯೆಯ ವಿರುದ್ಧ ಹೊನ್ನಾವರದಲ್ಲಿ ನಡೆದ ರೀತಿಯ ಬೃಹತ್ ಪ್ರತಿಭಟನೆಗಳು ಯಾಕೆ ನಡೆದಿಲ್ಲವೆಂದು ಪ್ರಶ್ನಿಸಿದರು.
ಕೊಡಗು ಜಿಲ್ಲೆಯಲ್ಲಿ ಹೈಟೆಕ್ ಜೀತ ಪದ್ಧತಿ ನಡೆಯುತ್ತಿದೆ ಎಂದು ಆರೋಪಿಸಿದ ಅಮೀನ್ ಮೊಹಿಸಿನ್ ಗ್ರಾ.ಪಂ ಅಧ್ಯಕ್ಷೆ ಈಶ್ವರಿಯ ದಿಗ್ಬಂಧನ, ಸಾಲ ಮರುಪಾವತಿಸಲಾಗದ ಹರೀಶ್ ಎಂಬುವವರ ಮೇಲೆ ನಾಯಿಗಳ ಮೂಲಕ ನಡೆಸಿದ ದಾಳಿ, ನೆಲ್ಲಿಹುದಿಕೇರಿಯಲ್ಲಿ ಹಸುಗಳ ವಿಚಾರದಲ್ಲಿ ನಡೆದ ಗುಂಡಿನದಾಳಿ, ಶಾಲಾ ಕಾಲೇಜುಗಳಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಪ್ರಕರಣಗಳು ದೌರ್ಜನ್ಯಕ್ಕೆ ಸಾಕ್ಷಿಯಾಗಿದೆ ಎಂದರು.
ಕುಂಜಿಲದ ದೇವಾಲಯ ವೊಂದರ ಪ್ರವೇಶದ ಗೇಟಿನ ಕಮಾನಿನಲ್ಲಿ ಹಸುಗಳ ಕಾಲನ್ನು ನೇತು ಹಾಕಿದ ಪ್ರಕರಣ ನಡೆದು ಇಷ್ಟು ದಿನಗಳೇ ಕಳೆದಿದ್ದರೂ ಆರೋಪಿಗಳು ಪತ್ತೆಯಾಗಿಲ್ಲ, ಹಾಗಿದ್ದರೆ ಇಂತಹ ಘಟನಾವಳಿಗಳ ಹಿಂದಿನ ಶಕ್ತಿ ಯಾವುದು ಎಂದು ಅಮೀನ್ ಮೊಹಿಸಿನ್ ಪ್ರಶ್ನಿಸಿದರು.
ವೇದಿಕೆಯ ಕಾರ್ಯದರ್ಶಿ ಕೆ.ಬಿ.ರಾಜು ಮಾತನಾಡಿ ಜ.6 ರಂದು ನಡೆಯುವ ಪ್ರತಿಭಟನಾ ಸಮಾವೇಶದಲ್ಲಿ ದಲಿತ ಸಂಘರ್ಷ ಸಮಿತಿಯ ಭೀಮಾವಾದ ಮತ್ತು ಕೃಷ್ಣಪ್ಪ ಸ್ಥಾಪಿತ ಸಂಘಟನೆ, ಎಸ್ಡಿಪಿಐ, ಬಹುಜನ ಸಮಾಜ ಪಕ್ಷ, ಸಿಪಿಐಎಂಎಲ್, ಬಹುಜನ ವಿದ್ಯಾರ್ಥಿ ಸಂಘ, ಪಿಎಫ್ಐ, ರೈತ ಸಂಘ, ಬಹುಜನ ಕಾರ್ಮಿಕ ಸಂಘ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ಆದಿವಾಸಿಗಳ ವಿಮೋಚನಾ ಸಂಘ, ಜೆಡಿಎಸ್ ಪಕ್ಷ ಸೇರಿದಂತೆ ವಿವಿಧ ಸಂಘಟನೆಗಳು ಪಾಲ್ಗೊಳ್ಳಲಿವೆ ಎಂದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಹೆಚ್.ಎಲ್. ದಿವಾಕರ್ ಹಾಗೂ ಬಹುಜನ ಕಾರ್ಮಿಕ ಸಂಘದ ಪ್ರಮುಖರಾದ ಕೆ.ಮೊಣ್ಣಪ್ಪ ಮಾತನಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಮನ್ಸೂರ್ ಆಲಿ ಉಪಸ್ಥಿತರಿದ್ದರು.