ಮಡಿಕೇರಿ, ಡಿ. 30: ಗೋಹತ್ಯೆ ನಿಷೇಧ ಮತ್ತು ಭಾರತೀಯ ಗೋ ತಳಿಗಳ ಸಂರಕ್ಷÀಣೆ ಕುರಿತು ಜಾಗೃತಿ ಮೂಡಿಸುವ ಬೃಹತ್ ಜನಾಂದೋಲನದ ‘ಅಭಯ ಗೋ ಯಾತ್ರೆ’ ಕೊಡಗಿಗೆ ಜ.4 ರಂದು ಆಗಮಿಸಲಿದೆ ಎಂದು ಕೊಡಗು ಗೋ ಪರಿವಾರ ಟ್ರಸ್ಟ್‍ನ ಕಾರ್ಯದರ್ಶಿ ಡಾ. ರಾಜಾರಾಮ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಭಿಯಾನದ ಮೂಲ ಉದ್ದೇಶವನ್ನು ಮುಖ್ಯಮಂತ್ರಿಗಳು ಹಾಗೂ ಪ್ರಧಾನಮಂತ್ರಿಗಳಿಗೆ ಮನವರಿಕೆ ಮಾಡಿಕೊಡುವ ಸಲುವಾಗಿ ಕರ್ನಾಟಕದ 31 ಜಿಲ್ಲೆಗಳಲ್ಲಿ ಅಭಯ ಗೋಯಾತ್ರೆ ನಡೆಯಲಿದೆ ಎಂದರು.

ಜಾತಿ, ಮತ, ವಯಸ್ಸಿನ ಭೇದವಿಲ್ಲದೆ ಕೊಡಗಿನ ಗೋ ಪ್ರೇಮಿಗಳು ಸಹಸ್ರಾರು ಸಂಖ್ಯೆಯಲ್ಲಿ ಅಭಯಾಕ್ಷರಕ್ಕೆ ಸಹಿ ಹಾಕುತ್ತಿದ್ದಾರೆ. ಹಲವು ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು, ಯುವ ಸಮೂಹ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಜ.4 ರಂದು ಕುಶಾಲನಗರ ಮಾರ್ಗವಾಗಿ

(ಮೊದಲ ಪುಟದಿಂದ) ಅಭಯ ಗೋ ಯಾತ್ರೆ ಕೊಡಗಿಗೆ ಆಗಮಿಸಲಿದ್ದು, ಭವ್ಯ ಸ್ವಾಗತದೊಡನೆ ಸುಂಟಿಕೊಪ್ಪ, ಮಡಿಕೇರಿ ನಗರ ಸಂಚಾರದ ನಂತರ ಚೆಟ್ಟಳ್ಳಿ ಮೂಲಕ ನೆಲ್ಲಿಹುದಿಕೇರಿ ತಲುಪಲಿದೆ. ಶ್ರೀರಾಮಚಂದ್ರಪುರ ಮಠಾಧೀಶರಾದ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹಾಗೂ ನಾಡಿನ ಇತರ ಸಂತ ಮಹಾಂತರ ಸಾನಿಧ್ಯದಲ್ಲಿ ಭವ್ಯವಾದ ಶೋಭಯಾತ್ರೆ ನೆಲ್ಲಿಹುದಿಕೇರಿಯ ಶ್ರೀಮುತ್ತಪ್ಪ ದೇವಸ್ಥಾನದಿಂದ, ಸಿದ್ದಾಪುರ ಶ್ರೀಅಯ್ಯಪ್ಪ ದೇವಸ್ಥಾನದವರೆಗೆ ವಾದ್ಯ, ನಾಟ್ಯಗಳ ಮೂಲಕ ಸಾಗಲಿದೆ. ಸಿದ್ದಾಪುರದ ಶ್ರೀರಾಮಮಂದಿರದಲ್ಲಿ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಗೋ ಭಕ್ತರಿಗೆ ಸಂದೇಶ ನೀಡಲಿದ್ದಾರೆ ಎಂದು ರಾಜಾರಾಮ್ ಮಾಹಿತಿ ನೀಡಿದರು.

ಅಹಿಂಸಾ ಮಾರ್ಗದ ಮೂಲಕ ಗೋ ಸಂರಕ್ಷಣೆಯ ಸಂದೇಶವನ್ನು ದೇಶಕ್ಕೆ ಸಾರುವಲ್ಲಿ ಇದು ಮಹತ್ವದ ಅಭಿಯಾನವಾಗಿದೆ. ರಾಜ್ಯದಲ್ಲಿ ಆರಂಭವಾಗಿರುವ ಈ ಆಂದೋಲನ ಮುಂದಿನ ದಿನಗಳಲ್ಲಿ ದೇಶದ ಇತರ ಭಾಗಗಳಿಗೂ ವ್ಯಾಪಿಸಿ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಜಾಗೃತಿ ಮೂಡಿಸಲಾಗುವದೆಂದರು.

ದೇಶದ ಪ್ರಧಾನಿ ಹಾಗೂ ರಾಜ್ಯದ ಮುಖ್ಯಮಂತ್ರಿಗಳಿಗೆ 1 ಕೋಟಿ ಸಹಿ ಸಂಗ್ರಹದ ಮನವಿ ಸಲ್ಲಿಸಲು ನಿರ್ಧರಿಸಲಾಗಿದ್ದು, ಈಗಾಗಲೆ 35 ಲಕ್ಷ ಮಂದಿ ಸಹಿ ಮಾಡಿದ್ದಾರೆ. ಜಾತಿ, ಧರ್ಮ, ಪಕ್ಷ ರಾಜಕೀಯವನ್ನು ಮೀರಿದ ಅಭಯಾಕ್ಷರ ಅಭಿಯಾನ ನಡೆಯುತ್ತಿದ್ದು, ಈ ಅಭಿಯಾನದಲ್ಲಿ ಅಭಯ ರಥ, ಸಂದೇಶ ರಥ ಹಾಗೂ ಅಗ್ರ ರಥಗಳು ಸಾಗಲಿವೆ. ಗೋ ಸಂರಕ್ಷಣೆÉಯ ವಿಚಾರದಲ್ಲಿ ಜನಾಭಿಪ್ರಾಯವೇ ಮುಖ್ಯವಾಗಿದ್ದು, ಬಹುಸಂಖ್ಯಾತರು ವೈಯಕ್ತಿಕ ಪತ್ರದ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಕರೆ ನೀಡಿದರು. ಈಗಾಗಲೇ ಜಿಲ್ಲೆಯಲ್ಲಿ ಸುಮಾರು 17 ಸಾವಿರ ಗೋಪ್ರೇಮಿಗಳು ಸಹಿ ಮಾಡಿದ್ದಾರೆ ಎಂದು ಡಾ.ರಾಜಾರಾಮ್ ತಿಳಿಸಿದರು.

ಟ್ರಸ್ಟಿ ಬಿ.ಕೆ.ಜಗದೀಶ್ ಮಾತನಾಡಿ ದೇಶದಲ್ಲಿ ಗೋಹತ್ಯೆ ಸಂಪೂರ್ಣವಾಗಿ ನಿಷೇಧವಾಗಬೇಕೆಂದು ಆಗ್ರಹಿಸಿದರು. ಜಿಲ್ಲೆಯಲ್ಲಿ 3 ಲಕ್ಷ ಗೋಪ್ರೇಮಿಗಳ ಸಹಿ ಸಂಗ್ರಹಿಸುವ ಗುರಿ ಹೊಂದಿರುವದಾಗಿ ತಿಳಿಸಿದರು.

ಅಭಿಯಾನದ ನೆಲ್ಲಿಹುದಿಕೇರಿ ಉಸ್ತುವಾರಿ ವಹಿಸಿರುವ ಟ್ರಸ್ಟ್‍ನ ಪ್ರಮುಖ ಪ್ರವೀಣ್ ಮಾತನಾಡಿ ಅಭಯ ಗೋಯಾತ್ರೆಯನ್ನು ಯಶಸ್ವಿಗೊಳಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ, ವಿಶ್ವ ಹಿಂದೂ ಪರಿಷತ್, ಬಜರಂಗದಳ, ಶ್ರೀರಾಮಸೇನೆ ಸೇರಿದಂತೆ ವಿವಿಧ ಹಿಂದೂ ಪರ ಸಂಘಟನೆಗಳು ಅಭಿಯಾನದಲ್ಲಿ ಪಾಲ್ಗೊಳ್ಳಲಿವೆ ಎಂದರು. ಜಿಲ್ಲೆಯಲ್ಲಿ ಗೋಹತ್ಯೆ ನಿಷೇಧವಿದ್ದರೂ ಸಿದ್ದಾಪುರ ಹಾಗೂ ನೆಲ್ಲಿಹುದಿಕೇರಿ ಭಾಗದಲ್ಲಿ ಗೋವುಗಳ ಹತ್ಯೆ ನಿರಂತರವಾಗಿ ನಡೆಯುತ್ತಿದೆ ಎಂದು ಪ್ರವೀಣ್ ಆರೋಪಿಸಿದರು.

ಗೋ ಯಾತ್ರೆ ಮಾರ್ಗ

ಜ.4 ರಂದು ಬೆಳಗ್ಗೆ 10 ಗಂಟೆಗೆ ಕುಶಾಲನಗರ ಮಾರ್ಗವಾಗಿ 11 ಗಂಟೆಗೆ ಸುಂಟಿಕೊಪ್ಪ, 12 ಗಂಟೆ ಮಡಿಕೇರಿ ನಗರ ಸಂಚಾರ, ಮಧ್ಯಾಹ್ನ 2 ಗಂಟೆಗೆ ಮಡಿಕೇರಿಯ ಆಂಜನೇಯ ದೇವಸ್ಥಾನದಿಂದ ತೆರಳಿ ನೆಲ್ಯಹುದಿಕೇರಿ ತಲುಪಲಿದೆ. ನಂತರ ಸಿದ್ದಾಪುರದಲ್ಲಿ ಶೋಭಾಯಾತ್ರೆ ಸಾಗಲಿದ್ದು, ಜ.5 ರಂದು ಬೆಳಗ್ಗೆ 7 ಗಂಟೆಗೆ ಚೆಯ್ಯಂಡಾಣೆ, ವೀರಾಜಪೇಟೆ, ಮಡಿಕೇರಿ ಮೂಲಕ ಸಂಪಾಜೆ ಮಾರ್ಗವಾಗಿ ಸುಳ್ಯ ತಲುಪಲಿದೆ.

ಸುದ್ದಿಗೋಷ್ಠಿಯಲ್ಲಿ ಹವ್ಯಕ ವಲಯದ ಉಪಾಧ್ಯಕ್ಷರಾದ ನಾರಾಯಣ ರಾವ್ ಉಪಸ್ಥಿತರಿದ್ದರು.