ಮಡಿಕೇರಿ, ಡಿ. 30: ಕೊಡಗು ಜಿಲ್ಲೆಗೆ ರೈಲ್ವೇ ಸಂಪರ್ಕ ಹಾಗೂ ರಸ್ತೆ ಅಭಿವೃದ್ಧಿಗೆ ಯಾವದೇ ಕಾರಣಕ್ಕೂ ಮರಗಳ ನಾಶಕ್ಕೆ ಅವಕಾಶ ಕೊಡುವದಿಲ್ಲವೆಂದು ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ಪರಿಸರವಾದಿಗಳು ಹೇಳಿಕೆ ನೀಡುತ್ತಿದ್ದಾರೆ. ಹೀಗಿದ್ದೂ ಕೊಡಗಿನಿಂದ ನಿರಂತರವಾಗಿ ಮರಗಳ ಹನನದೊಂದಿಗೆ ಹೊರರಾಜ್ಯ ಹಾಗೂ ಜಿಲ್ಲೆಗಳಿಗೆ ಸಾಗಿಸುತ್ತಿರುವ ದೃಶ್ಯ ಕಾಣುವಂತಾಗಿದೆ.

ಮಡಿಕೇರಿ- ಸಂಪಾಜೆ ಮಾರ್ಗದ 22ನೇ ಮೈಲಿಕಲ್ಲು ದಾಟುತ್ತಿದ್ದಂತೆಯೇ ಮೀಸಲು ಅರಣ್ಯದೊಳಗೆ ಹೊಸದಾಗಿ ಕಾಡನ್ನು ನಾಶಗೊಳಿಸಿ ರಸ್ತೆ ನಿರ್ಮಾಣಗೊಂಡಿರುವ ದೃಶ್ಯ ಎದುರಾಗಲಿದೆ. ಇನ್ನು ಈ ಹೆದ್ದಾರಿಯಲ್ಲಿ ನಿತ್ಯವೂ ಲಾರಿಗಳಲ್ಲಿ ಭಾರೀ ಗಾತ್ರದ ಮರಗಳನ್ನು ಲೋಡುಗಟ್ಟಲೆ ತುಂಬಿಸಿ ಸಾಗಾಟಗೊಳಿಸುತ್ತಿರುವದು ಗೋಚರಿಸುತ್ತಿದೆ.

ಒಟ್ಟಿನಲ್ಲಿ ಕೊಡಗಿನ ಸಮಗ್ರ ಅಭಿವೃದ್ಧಿಯ ವಿಷಯದಲ್ಲಿ ನಮ್ಮ ಜನರಲ್ಲಿ ಗೊಂದಲವಿದೆಯೇ ಹೊರತು, ಈ ನಾಡಿನ ಪ್ರಾಕೃತಿಕ ಸಂಪತ್ತು ನಿತ್ಯ ಒಂದಿಲ್ಲೊಂದು ಮಾರ್ಗದಲ್ಲಿ ಲೂಟಿಯಾಗುತ್ತಿರುವ ಬಗ್ಗೆ ಜಾಗೃತಿಯೊಂದಿಗೆ ಧ್ವನಿ ಮೊಳಗುತ್ತಿಲ್ಲ ಎನ್ನುವದು ವಾಸ್ತವ.

ಹೀಗಾಗಿ ಕಳೆದ ನಾಲ್ಕೈದು ವರ್ಷಗಳಲ್ಲಿ, ಕಳೆದ ಹತ್ತಾರು ವರ್ಷಗಳ ಹಿಂದೆ ಕೊಡಗಿನಲ್ಲಿ ನಡೆದಿರುವ ಮರಗಳ ಹನನದಷ್ಟೇ ಅವ್ಯಾಹತವಾಗಿ ಕಾಡು ನಾಶಗೊಳ್ಳುತ್ತಿರುವದು ಎಲ್ಲೆಡೆ ಕಣ್ಣಿಗೆ ಎದುರಾಗುತ್ತಿದೆ. ಆ ಬಗ್ಗೆ ಎಲ್ಲರೂ ಗಾಢ ಮೌನ ವಹಿಸಿರುವದು ಸಾಕಷ್ಟು ಅಚ್ಚರಿಯೊಂದಿಗೆ ಸಂಶಯಕ್ಕೆ ಅವಕಾಶ ಕಲ್ಪಿಸಿರುವದು ಸುಳ್ಳಲ್ಲ.