ಗೋಣಿಕೊಪ್ಪಲು, ಡಿ.29: ಗ್ರಾಮೀಣ ಭಾಗದ ಸುದ್ದಿಗಳನ್ನು ಬಿತ್ತರಿಸುವ ಮೂಲಕ ಜನ ಮಾನಸದಲ್ಲಿ ಪ್ರಶಂಸೆಗೆ ಕಾರಣವಾಗಿರುವ ‘ಕೊಡಗು ಧ್ವನಿ’ ವಾರಪತ್ರಿಕೆ ರೈತರ ಪರವಾದ ಸುದ್ದಿಗಳನ್ನು ಪ್ರಕಟಿಸುವಂತಾಗಲಿ ಅನ್ನದಾತನ ಕಷ್ಟದಲ್ಲಿ ಭಾಗಿಗಳಾಗಲಿ ಎಂದು ಕರ್ನಾಟಕದ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಕಾರ್ಯದರ್ಶಿ, ಕಳ್ಳಿಚಂಡ ಧನು ಅಭಿಪ್ರಾಯಪಟ್ಟರು.
ಗೋಣಿಕೊಪ್ಪಲುವಿನ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ‘ಕೊಡಗು ಧ್ವನಿ’ ವಾರಪತ್ರಿಕೆ 9ನೇ ವರ್ಷದ ವಾರ್ಷಿಕ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಇವರು ಪತ್ರಿಕೆ ಆರಂಭಿಸುವದು ಸುಲಭ ಆದರೆ ಅದನ್ನು ಮುನ್ನೆಡೆಸುವದು ಅತ್ಯಂತ ಕಠಿಣ ಎಂದರು. 2018ರ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕುಲ್ಲೇಟೀರ ಪ್ರವಿಮೊಣ್ಣಪ್ಪ ಬಡವರ ಪರವಾದ ಸುದ್ದಿಗಳಿಗೆ ಪ್ರಶಸ್ತಿ ಬಂದಿರುವದು ಪತ್ರಿಕೆಯ ಗೌರವವನ್ನು ಹೆಚ್ಚಿಸಿದೆ. ಮುಂದಿನ ದಶಮಾನೋತ್ಸವ ಕಾರ್ಯಕ್ರಮವು ಅರ್ಥಪೂರ್ಣವಾಗಿ ನಡೆಯಲಿ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗೋಣಿಕೊಪ್ಪ ಪ್ರೆಸ್ ಕ್ಲಬ್ನ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಪತ್ರಿಕೆ ದೊಡ್ಡ ಮಟ್ಟದಲ್ಲಿ ಬೆಳೆಯಲು ಸಂಪಾದಕ ಮಂಡಳಿಯ ಪರಿಶ್ರಮವೇ ಕಾರಣ ಎಂದರು.
‘ಕೊಡಗು ಧ್ವನಿ’ಯ ಉಪ ಸಂಪಾದಕ ಹೆಚ್.ಜೆ. ರಾಕೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಪಾದಕ ಹೆಚ್.ಕೆ. ಜಗದೀಶ್ ಮುಂದಿನ ವರ್ಷ ದಶಮಾನೋತ್ಸವ ನಡೆಯಲಿದ್ದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವದು ಎಂದರು.
ವರದಿಗಾರ್ತಿ ರೇಖಾಗಣೇಶ್ ಸ್ವಾಗತಿಸಿದರು. ಕಂದಾ ದೇವಯ್ಯ ಕಾರ್ಯಕ್ರಮ ನಿರೂಪಿಸಿದರು. ಅಜ್ಜಮಾಡ ಕುಶಾಲಪ್ಪ ಪ್ರಾರ್ಥಿಸಿ ಅರುಣ್ ಕುಮಾರ್ ವಂದಿಸಿದರು.