ಮಡಿಕೇರಿ, ಡಿ. 29: ಇಂದು ವೈಕುಂಠ ಏಕಾದಶಿ. ಈ ಶುಭ ದಿನದಂದು ಸ್ವರ್ಗದ ಬಾಗಿಲು ತೆರೆದುಕೊಳ್ಳುತ್ತದೆ... ಎಂಬದು ಬಹುಕೋಟಿ ಜನತೆಯ ನಂಬಿಕೆ. ಹಾಗಾಗಿ ಶ್ರೀ ಮಹಾವಿಷ್ಣುವಿನ ಅಂಶವಿರುವ ಎಲ್ಲ ದೇವಮಂದಿರಗಳಲ್ಲಿ ವಿಶೇಷಪೂಜೆ, ಪ್ರಾರ್ಥನೆ ಸಲ್ಲುತ್ತದೆ. ಇಂತಹ ಮಹಾದಿನದಂದು ಮನೆಯ ಬಾಗಿಲು ತೆರೆದು ಹೊರ ಬರುವಷ್ಟರಲ್ಲಿ ಮುಂಜಾವಿನ ಹೊತ್ತು ಆನೆಯೊಂದು ಎದುರಾದರೆ ಹೇಗೆ ಅನಿಸಬಹುದು! ಅಂತಹ ಭಯಾನಕ ಹಾಗೂ ಅಚ್ಚರಿಯ ಅನುಭವವಾಗಿದ್ದು ಮಡಿಕೇರಿಯ ವಕೀಲ ಪಳೆಯಂಡ ಶಂಭು ಸುಬ್ಬಯ್ಯ ಅವರಿಗೆ. ಇಂದು ಬೆಳಗ್ಗಿನ 4.45ರ ಸುಮಾರಿಗೆ ಸುಬ್ಬಯ್ಯ ದಂಪತಿ ಬೇಗನೆ ಎದ್ದು ಪಾರಾಣೆಯ ತಮ್ಮ ತೋಟಕ್ಕೆ ಹೊರಡುವ ತಯಾರಿಯಲ್ಲಿ ಇದ್ದರಂತೆ. ಈ ವೇಳೆ ಹೊರಗಡೆ ಶಬ್ದ ಕೇಳಿದ್ದು, ಯಾವದೋ ದನಗಳು ಇವರ ಮನೆಯ ಬಳಿ ಬಂದಿರಬಹುದು ಎಂದುಕೊಂಡರಂತೆ!
ಹೀಗೆ ಊಹಿಸಿಕೊಂಡ ಸುಬ್ಬಯ್ಯ ಬಾಗಿಲು ತೆರೆದು ವಿದ್ಯುತ್ ದೀಪ ಹಾಕಿ ಹೊರಗೆ ಹೆಜ್ಜೆ ಇಡುವಷ್ಟರಲ್ಲಿ ಕಾಡಾನೆÀ ತನ್ನ ಸೊಂಡಿಲು ಮೇಲೆತ್ತಿ ನಿಂತಿದ್ದು ಗೋಚರಿಸಿದೆ. ನಿಂತಲ್ಲೇ ಬೆವರಿಹೋದ ಅವರು, ಮಾತು ಹೊರಡದೆ ಅರೆಕ್ಷಣ ಸಾವರಿಸಿಕೊಂಡು ಕೈ ಸನ್ನೆಯೊಂದಿಗೆ ಶಬ್ದ ಮಾಡಿದಾಗ, ಈ ಕಾಡಾನೆ ಕ್ಷಣಾರ್ಧದಲ್ಲಿ ಏನೂ ಉಪದ್ರ ಮಾಡದೆ ಬಂದ ದಾರಿಯಲ್ಲೆ ಹಿಂತೆರಳಿದೆ. ಅಷ್ಟು ಮಾತ್ರಕ್ಕೆ ಕುತೂಹಲ ತಡೆಯಲಾರದ ಶಂಭು ಸುಬ್ಬಯ್ಯ ಮನೆ ಬಾಗಿಲು ಮುಚ್ಚಿ ಕೊಂಡು ಒಳಗಿದ್ದ ಪತ್ನಿಗೆ ವಿಷಯ ತಿಳಿಸಿದ್ದಾರೆ.
(ಮೊದಲ ಪುಟದಿಂದ) ಪತ್ನಿ ಕಮಲ ಆಘಾತಗೊಂಡರೂ ಮತ್ತೆ ಸಾವರಿಸಿಕೊಂಡು ಎಲ್ಲವೂ ದೇವರ ದಯೆಯೆಂದು ನಿಟ್ಟುಸಿರು ಬಿಟ್ಟರಂತೆ. ಅಲ್ಲದೆ ಬಾಗಿಲು ತೆರೆದು ಹೊರಗೆ ನೋಡಿದ್ದರಿಂದ ಆನೆ ಬಂದಿದ್ದ ದಾರಿಯಲ್ಲೇ ಹಿಂತಿರುಗಿದ್ದಲ್ಲದೆ ಯಾವದೇ ಹಾನಿಗೊಳಿಸದಿರುವದು ದೇವರ ದಯೆಯೆಂದು ಸಮಾಧಾನಪಟ್ಟುಕೊಂಡರಂತೆ.
ವೈದ್ಯರ ತೋಟಕ್ಕೆ
ಇತ್ತ ಚೈನ್‍ಗೇಟ್‍ಗಾಗಿ ಶಾಸಕ ಕೆ.ಜಿ. ಬೋಪಯ್ಯ ಅವರ ಮನೆಯ ಪಕ್ಕದಲ್ಲೇ ರಸ್ತೆಮಾರ್ಗವಾಗಿ ಬಂದಿರುವ ಈ ಜೋಡಿಯಾನೆಗಳು, ಡಾ. ನಡಿಬೈಲು ಉದಯಶಂಕರ ಅವರ ಗೇಟ್ ಬಳಿ ಸಿಮೆಂಟ್ ಕಟ್ಟೆ ಒಡೆದುಕೊಂಡು ಮನೆಯತ್ತ ತೆರಳಿವೆ. ಕೆಲವೇ ಅಡಿಗಳ ಅಂತರದಲ್ಲಿ ಮನೆ ಅಂಗಳದತ್ತ ಸಾಗದೆ ಕಾಲುದಾರಿಯಲ್ಲಿ ತೋಟದೊಳಗೆ ಇಳಿದಿವೆ. ಅವರ ತೋಟದಲ್ಲಿ ಸಾಕಷ್ಟು ಬಾಳೆಯನ್ನು ಬುಡ ಸಹಿತ ಕಿತ್ತು ಸಿಗಿದು ಒಳಗಿನ ದಿಂಡುಗಳನ್ನು ತಿಂದಿವೆ. ಗಂಟೆಗಟ್ಟಲೆ ಅಲ್ಲೇ ತಂಗಿದ್ದು, ಲದ್ದಿ ಹಾಕುತ್ತಾ ನಾಲ್ಕಾರು ಕಡೆ ತಿರುಗಾಡಿವೆ. ಪಪ್ಪಾಯಿ (ಪರಂಗಿ)ಯ ಆಳೆತ್ತರ ಗಿಡವೊಂದನ್ನು ಬುಡ ಸಹಿತ ತಿಂದು ಹಾಕಿರುವದು ಇಲ್ಲಿ ಇನ್ನೂ ವಿಶೇಷ.
ಮುಂಜಾವಿನ ಕತ್ತಲೆ ಸರಿಯುತ್ತಿದ್ದಂತೆ ದಾರಿಹೋಕರ ಶಬ್ದದಿಂದ ಮುಂದೆ ಸಾಗಿರುವ ಜೋಡಿಯಾನೆಗಳು, ಕೆಸರು ನಡುವೆ ಬೇಲಿದಾಟಿಕೊಂಡು ಕೊಕ್ಕಲೆರ ಬೆಳ್ಯಪ್ಪ ಅವರ ಪಾಳುಗದ್ದೆಯಲ್ಲಿ ಅಡ್ಡಾಡಿವೆ. ತಮ್ಮ ತೋಟದೊಳಗೆ ಬಂದು ಬೀಡುಬಿಟ್ಟಿದ್ದ ಜೋಡಿಯಾನೆಗಳ ಇರುವಿಕೆಯಿಂದ ಡಾ. ಉದಯಶಂಕರ್ ದಂಪತಿ ಇಂದು ವೈಕುಂಠ ಏಕಾದಶಿ ಹಿನ್ನೆಲೆ ತುಂಬಾ ಹರ್ಷದೊಂದಿಗೆ ಫಸಲು ನಷ್ಟದ ಬಗ್ಗೆ ಬೇಸರಪಟ್ಟುಕೊಂಡಂತೆ ಕಾಣಲಿಲ್ಲ; ಬದಲಾಗಿ ಈ ದಂಪತಿ ಕೂಡ ಆಹಾರ ಸಿಗದೆ ಅವು ತಾನೇ ಏನು ಮಾಡಿಯಾವು... ಪಾಪ... ಎಂದು ನಿಟ್ಟುಸಿರುಬಿಟ್ಟರು.
ಜೋಡಿಯಾನೆಗಳು ಗೋಚರ
ಇಂದು ಮುಂಜಾವಿನ 5 ಗಂಟೆ ಸುಮಾರಿಗೆ ಮಡಿಕೇರಿಯ ಜಿಲ್ಲಾ ಕ್ರೀಡಾಂಗಣ (ಮ್ಯಾನ್ಸ್ ಕಾಂಪೌಂಡ್) ಬಳಿ ಈ ಕಾಡಾನೆಗಳು ಇರುವ ಬಗ್ಗೆ ಸುತ್ತಮುತ್ತಲಿನ ಪೇಟೆ ನಿವಾಸಿಗಳಲ್ಲಿ ಭಯದ ವಾತಾವರಣದೊಂದಿಗೆ ಮನೆಯೊಳಗಿನಿಂದ ಹೊರಬರದಂತ ಪರಿಸ್ಥಿತಿ ಎದುರಾಯಿತು.
ಮ್ಯಾನ್ಸ್ ಕಾಂಪೌಂಡ್ ಬಳಿ ಕೊಕ್ಕಲೆರ ಬೆಳ್ಯಪ್ಪ ಅವರ ಪಾಳುಗದ್ದೆಯಲ್ಲಿ ಸುಳಿದಾಡಿರುವ ಈ ಜೋಡಿ ಗಂಡಾನೆಗಳ ಸುಳಿವು ಅರಣ್ಯ ಇಲಾಖೆಗೆ ಸಿಕ್ಕಿದ ಬೆನ್ನಲ್ಲೇ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಅವರ ಪ್ರಕಾರ ಮಧ್ಯರಾತ್ರಿ ಈ ಕಾಡಾನೆ ಜೋಡಿ ಕಾಡಿನಿಂದ ನಗರ ಪ್ರವೇಶಿಸಿವೆ. ಈ ವೇಳೆ ಪೊಲೀಸ್ ಹಾಗೂ ಅರಣ್ಯ ಸಿಬ್ಬಂದಿ ಎಸಿಎಫ್ ನೆಹರು, ಅರಣ್ಯ ವಲಯಾಧಿಕಾರಿ ವಿಜಯಕುಮಾರ್ ನೇತೃತ್ವದಲ್ಲಿ ಆನೆಗಳು ನಗರದೊಳಗೆ ಮುನ್ನುಗ್ಗದಂತೆ ಹಿಮ್ಮೆಟ್ಟಿಸುವ ಕಾರ್ಯಾಚರಣೆ ನಡೆಸಿದ್ದಾರೆ.
ಮ್ಯಾನ್ಸ್ ಕಾಂಪೌಂಡ್‍ನಿಂದ ಹಿಂತಿರುಗಿದ ಈ ಸಲಗಗಳು ಗೌಡ ಸಮಾಜದ ಕೆಳಗಿನ ರಸ್ತೆಯಲ್ಲಿ ಮುನ್ನುಗ್ಗುವದರೊಂದಿಗೆ, ಅರಣ್ಯ ಸಿಬ್ಬಂದಿ ಬೆದರುಗುಂಡು ಸಿಡಿಸಿದ ವೇಳೆ ಮತ್ತಷ್ಟು ಗಾಬರಿಯಿಂದ ಸಾಗುತ್ತಾ, ಕೊಡವ ಸಮಾಜದ ಸ್ಮಶಾನದೊಳಗೆ ನುಸುಳಿಕೊಂಡಿತ್ತು.
ಮತ್ತೆ ಪಟಾಕಿ ಸಿಡಿಸುತ್ತಾ ಅರಣ್ಯ ತಂಡ ರುದ್ರಭೂಮಿಯಿಂದ ಹಿಮ್ಮೆಟ್ಟಿಸಿದ ಸಂದರ್ಭ ಸಾಕಷ್ಟು ಕಸರತ್ತು ನಡೆಸಿದ ಗಜಗಳು ಚೈನ್‍ಗೇಟ್ ಬಳಿ ಕೊನೆಗೂ ಮೈಸೂರು ಹೆದ್ದಾರಿಗಿಳಿದು ಆ ಮಾರ್ಗವಾಗಿ ಬರುತ್ತಿದ್ದ ವಾಹನ ಚಾಲಕರಲ್ಲಿ ಭಯ ಹುಟ್ಟಿಸಿದವು. ಸಾಕಷ್ಟು ಕಸರತ್ತು ಬಳಿಕ ಪಕ್ಕದ ಕಾಫಿ ತೋಟದೊಳಗೆ ಹೆದ್ದಾರಿ ಬಿಟ್ಟು ನುಸುಳಿದವು. ಈ ಸಂದರ್ಭ ಬೆದರುಗುಂಡು ಶಬ್ದಕ್ಕೆ ತೋಟದ ಮೂಲಕ ಮಡಿಕೇರಿ ಪೂರ್ವ ವಲಯ ಮೀಸಲು ಅರಣ್ಯದತ್ತ ಓಡಿ ಹೋದವು.
ಈ ವೇಳೆ ಮುಂಜಾವಿನಲ್ಲಿ ನಗರದಲ್ಲಿ ಬೆಳಗಿನ ವಾಯು ವಿಹಾರಕ್ಕೆ ಹೊರಟಿದ್ದವರ ಸಹಿತ ದಾರಿ ಹೋಕರು, ಇತರ ವಾಹನಗಳಲ್ಲಿ ತೆರಳುತ್ತಿದ್ದವರು ಭಯದಿಂದ ಜಾಗ ಖಾಲಿ ಮಾಡಿದ ದೃಶ್ಯ ಎದುರಾಯಿತು. ಬೆಳಗಿನ ಜಾವ ಕಾಣಿಸಿಕೊಂಡ ಕಾಡಾನೆಗಳನ್ನು ಸತತ ಎರಡು ತಾಸು ಕಾರ್ಯಾಚರಣೆ ಮೂಲಕ ಕೊನೆಗೂ ಕಾಡಿಗೆ ಹಿಮ್ಮೆಟ್ಟಿಸಲಾಯಿತು.
ಮತ್ತೆ ಕಾರ್ಯಾಚರಣೆ: ಮತ್ತೆ ಅರಣ್ಯ ಭವನ ಹಿಂಭಾಗದ ಕಾಡಿನಿಂದ ಅರಣ್ಯಾಧಿಕಾರಿ ವಿಜಯಕುಮಾರ್ ನೇತೃತ್ವದಲ್ಲಿ ಉಪ ವಲಯಾಧಿಕಾರಿ ಬಾಬು ರಾಥೋಡ್, ಸನ್ನಿ, ಸುಧಾ, ಜಾನ್, ಮಹೇಶ್, ರವಿ, ಶಿವಕುಮಾರ್, ನಿತಿನ್, ಶೇಖರ್, ರತನ್, ಅನಿಲ್, ವಾಸುದೇವ್ ತಂಡ ಪುನಃ ಕಾರ್ಯಾಚರಣೆ ಮುಂದುವರಿಸಿದರು. ಕಾಡಿನೊಳಗೆ ಆನೆಗಳು ನುಸುಳಿ ಹೋಗಿದ್ದ ಮಾರ್ಗದಲ್ಲೇ ಸಾಗಿದಾಗ ಮಾವಿನ ಸೊಪ್ಪು ತಿನ್ನಲು ಕೊಂಬೆ ಮುರಿದಿರುವ ಕುರುಹು ಲಭಿಸಿತು.
ಅದೇ ಹಾದಿಯಲ್ಲಿ ಸಾಗಿದಾಗ ಅನತಿ ದೂರದಲ್ಲಿ ಆಗತಾನೆ ಸಾಗಿರುವದು ಖಾತರಿಯೊಂದಿಗೆ ಲದ್ದಿ ಹಾಕಿದ್ದು, ದೂರದಲ್ಲಿ ಕಾಡಾನೆಗಳು ಇರುವದು ಮತ್ತೆ ಖಾತರಿಗೊಂಡಿತು. ಈ ವೇಳೆ ಸಾಕಷ್ಟು ತಯಾರಿಯೊಂದಿಗೆ ಅರಣ್ಯದ ನಡುವೆ ಇರುವ ಪಾಳುಬಂಗಲೆಯ ಪಕ್ಕದ ಕಾಡಿಗೆ ಅಟ್ಟಲಾಯಿತು. ಪೊನ್ನಚೆಟ್ಟಿರ ಕುಟುಂಬದ ಜಾಗಕ್ಕಾಗಿ ಈ ಜೋಡಿ ದೈತ್ಯ ಮುನ್ನುಗ್ಗಿತು. ಹೀಗೆ ನಿರಂತರ ಬೆನ್ನಟ್ಟಿದ ಅರಣ್ಯ ತಂಡ ಅವುಗಳನ್ನು ಮೋದೂರು ಸಮೀಪದ ಜೇನುಕಾಡುವಿಗೆ ಸಂಜೆಗತ್ತಲೆ ನಡುವೆ ಓಡಿಸಿದೆ. ಈ ನಡುವೆ ರಾತ್ರಿ ಮತ್ತೆ ಕಡಗದಾಳುವಿನಲ್ಲಿ ಕಾಡಾನೆಗಳು ಇರುವ ಮಾಹಿತಿ ಲಭಿಸಿದೆ. ಬಹುಶಃ ನಾಲ್ಕಾರು ಕಾಡಾನೆ ಹಿಂಡಿನಿಂದ ಬೇರ್ಪಟ್ಟಿದ್ದ ಎರಡು ಗಂಡಾನೆಗಳು ನಿನ್ನೆ ತಡರಾತ್ರಿಯಲ್ಲಿ ಮಡಿಕೇರಿ ಪೇಟೆಯತ್ತ ಧಾವಿಸಿರುವ ಸಾಧ್ಯತೆಯಿರುವದಾಗಿ ಅರಣ್ಯ ವಲಯಾಧಿಕಾರಿ ವಿಜಯಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಕಡಗದಾಳುವಿನಲ್ಲಿ ಕಾಣಿಸಿಕೊಂಡಿರುವ ಕಾಡಾನೆಗಳ ಬಗ್ಗೆ ರಾತ್ರಿ ಇಡೀ ಇಲಾಖಾ ಸಿಬ್ಬಂದಿ ನಿಗಾವಹಿಸಲಿದ್ದು, ತಾ. 30ರಂದು (ಇಂದು) ಮತ್ತೆ ಕಾರ್ಯಾಚರಣೆಯೊಂದಿಗೆ ಎಲ್ಲವನ್ನೂ ಮೀನುಕೊಲ್ಲಿ ಅರಣ್ಯದತ್ತ ಓಡಿಸಲಾಗುವದು. ಅಲ್ಲದೆ, ತೋಟ ಮಾಲೀಕರು ಹಾಗೂ ಸಾರ್ವಜನಿಕರು ಜಾಗೃತರಿದ್ದು, ಆನೆಗಳ ಚಲನವಲನ ಕಂಡುಬಂದರೆ ಇಲಾಖೆಗೆ ತಿಳಿಸುವಂತೆ ಸಲಹೆ ನೀಡಿದ್ದಾರೆ. ಇಂದಿನ ಕಾರ್ಯಾಚರಣೆಯಲ್ಲಿ ಮಡಿಕೇರಿ ವಲಯ ಹಾಗೂ ಕುಶಾಲನಗರ ವಲಯ ಇಲಾಖಾ ತಂಡ ಕೂಡ ಭಾಗವಹಿಸಿದ್ದಾಗಿ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ.