ಸೋಮವಾರಪೇಟೆ, ಡಿ. 29: ಸಮೀಪದ ಕಲ್ಕಂದೂರಿನ ಶ್ರೀ ಶಾಸ್ತ ಯುವಕ ಸಂಘದ ವತಿಯಿಂದ ಗ್ರಾಮದ ಕೂಡುರಸ್ತೆಯಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ಭಜನಾ ಮಂದಿರದಲ್ಲಿ ಜ. 1 ರಂದು ಮಂಡಲ ಪೂಜೋತ್ಸವ ಕಾರ್ಯಕ್ರಮ ನಡೆಯಲಿದೆ.

ಅಂದು ಬೆಳಿಗ್ಗೆ 9 ಗಂಟೆಗೆ ಭಜನಾ ಮಂದಿರದಲ್ಲಿ ಗಣಪತಿ ಹೋಮ, ಶ್ರೀ ಅಯ್ಯಪ್ಪಸ್ವಾಮಿಗೆ ಲಕ್ಷಾರ್ಚನೆಗಳು ನಡೆಯಲಿದೆ. ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಲೋಕೇಶ್ ತಿಳಿಸಿದ್ದಾರೆ.

ಸಂಜೆ 6.30ಕ್ಕೆ ಗ್ರಾಮ ದೇವತೆಗಳಿಗೆ ಹಾಗೂ ವನ ದೇವತೆಗಳಿಗೆ ಪೂಜೆಗಳು ನಡೆದು, ನಂತರ ಯಡೂರಿನ ಸೋಮೇಶ್ವರ ದೇವಾಲಯದ ಬಳಿಯಿಂದ ಶ್ರೀ ಅಯ್ಯಪ್ಪಸ್ವಾಮಿಯ ಭಾವಚಿತ್ರವನ್ನು ಕಲಶ ಮತ್ತು ದೀಪಾರಾಧನೆಯೊಂದಿಗೆ ಕೇರಳದ ಚಂಡೆ ಮದ್ದಳೆಯೊಂದಿಗೆ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯ ಮೂಲಕ ಕೂಡುರಸ್ತೆಯಲ್ಲಿನ ಶ್ರೀ ಅಯ್ಯಪ್ಪಸ್ವಾಮಿ ಭಜನಾ ಮಂದಿರಕ್ಕೆ ತರಲಾಗುವದು ಎಂದು ಮಾಹಿತಿ ನೀಡಿದ್ದಾರೆ. ಧಾರ್ಮಿಕ ಸಮಾರಂಭದಲ್ಲಿ ಕಲ್ಕಂದೂರು ಪಾಶ್ರ್ವನಾಥ ದೇವಾಲಯದ ಪ್ರಧಾನ ಅರ್ಚಕ ಸುರೇಂದ್ರ ಕುಮಾರ್ ಜೈನ್, ಗ್ರಾಮದ ಮಾಜಿ ಸೈನಿಕ ಅಯ್ಯಪ್ಪ, ಯುವಕ ಸಂಘದ ಮಾರ್ಗದರ್ಶಕರಾಗಿದ್ದ ದಿವಂಗತ ಕೆ.ಜೆ. ಧರ್ಮಪ್ಪರವರ ಪತ್ನಿ ವನಜಾಕ್ಷಿ, ಆರೋಗ್ಯ ಕಾರ್ಯಕರ್ತೆ ಹೇಮಲತ ಅವರುಗಳನ್ನು ಸನ್ಮಾನಿಸಲಾಗುವದು. ರಾತ್ರಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಲಾಗುವದು ಎಂದು ತಿಳಿಸಿದ್ದಾರೆ.

ಜಾತ್ರೆ ದಿನ ಮಜ್ಜಿಗೆ ವಿತರಣೆ: ಜನವರಿ 15 ರಂದು ಶಾಂತಳ್ಳಿಯಲ್ಲಿ ನಡೆಯಲಿರುವ ಶ್ರೀ ಕುಮಾರಲಿಂಗೇಶ್ವರಸ್ವಾಮಿಯ ಜಾತ್ರೋತ್ಸವದ ಅಂಗವಾಗಿ ಶ್ರೀ ಶಾಸ್ತಾ ಯುವಕ ಸಂಘದ ವತಿಯಿಂದ ಶಾಂತಳ್ಳಿಯಲ್ಲಿ ಮಜ್ಜಿಗೆ ವಿತರಿಸಲಾಗುವದು ಎಂದು ಮಾಹಿತಿ ನೀಡಿದ್ದಾರೆ.