ನಾಪೋಕ್ಲು, ಡಿ. 29: ಹಿತಮಿತ ಆಹಾರ, ವ್ಯಾಯಾಮ ಸೇರಿದಂತೆ ಪಂಚಸೂತ್ರವೇ ಆರೋಗ್ಯ ಮತ್ತು ದೀರ್ಘಾಯುಷ್ಯದ ಗುಟ್ಟು ಎಂದು ಹಿರಿಯರು ಹಾಗೂ ನಿವೃತ್ತ ಶಿಕ್ಷಕ ಕಟ್ರತನ ಬೆಳ್ಯಪ್ಪ ಹೇಳಿದರು. ಪಾರಾಣೆ ಗೌಡ ಸಮಾಜದಲ್ಲಿ ಶತಾಯುಷಿ ಮುಕ್ಕಾಟಿರ ಸುಬ್ಬವ್ವ (ತವರು ಮನೆ ಕೊಡಪಾಲು) ಅವರಿಗೆ ನೂರು ವರ್ಷ ತುಂಬಿದ ಪ್ರಯುಕ್ತ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ನಗರಸಭಾ ಅಧ್ಯಕ್ಷೆ ಹಾಗೂ ಸಂಬಂಧಿಕರೂ ಆದ ಕೂಡಕಂಡಿ ಕಾವೇರಮ್ಮ ಸೋಮಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಬಿದ್ದಂಡ ಉಷಾ ದೇವಮ್ಮ, ಭಾಗೀರಥಿ, ದಯಾನ ಮಣಿ, ಕುಟ್ಟನ ತಿಮ್ಮಯ್ಯ ಇವರುಗಳು ಮಾತನಾಡಿದರು.
ಸುಬ್ಬವ್ವ ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಟುಂಬದ ಪಟ್ಟೇದಾರ ಚಿಣ್ಣಪ್ಪ ವಹಿಸಿದ್ದು ವೇದಿಕೆಯಲ್ಲಿ ಪಾರಾಣೆ ಗೌಡ ಸಮಾಜದ ಮಾಜಿ ಅಧ್ಯಕ್ಷ ಮುಕ್ಕಾಟಿರ ಮಾದಪ್ಪ, ಕೂಡಕಂಡಿ ಬಾಲಕೃಷ್ಣ, ಶತಾಯುಷಿ ಅವರ ಪುತ್ರರಾದ ರವಿ ಭೀಮಯ್ಯ, ಪುಟ್ಟು ಕುಶಾಲಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮೊದಲು ಕಿರುಂದಾಡು ಶ್ರೀ ಭಗವತಿ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.