ಕುಶಾಲನಗರ, ಡಿ. 29: ಅಭಿವೃದ್ಧಿಯ ನಾಗಾಲೋಟದ ನಡುವೆ ಪರಸ್ಪರ ಸಂಬಂಧಗಳು ಮರೆಯಾಗುವದರೊಂದಿಗೆ ಮಾನವೀಯ ಮೌಲ್ಯ ಕುಸಿಯುತ್ತಿರುವದು ವಿಷಾದನೀಯ ಎಂದು ಸೋಮವಾರಪೇಟೆ ಸಂತ ಜೋಸೆಫರ ಶಾಲೆಯ ಮುಖ್ಯೋಪಾಧ್ಯಾಯ ಹ್ಯಾರಿ ಮೋಸ್ ತಿಳಿಸಿದ್ದಾರೆ.
ಅವರು ಕುಶಾಲನಗರದ ತಪೋವನ ಕಾರ್ಮೆಲ್ ಮಠದಲ್ಲಿ ಹಮ್ಮಿಕೊಂಡ 3ನೇ ವರ್ಷದ ಸೌಹಾರ್ದಕೂಟದಲ್ಲಿ ಪಾಲ್ಗೊಂಡು ಮಾತನಾಡಿದರು. ಕಷ್ಟಸುಖದಲ್ಲಿ ಪಾಲ್ಗೊಳ್ಳುವವರು ನೆರೆಹೊರೆಯವರಾದರೂ ಇತ್ತೀಚಿನ ದಿನಗಳಲ್ಲಿ ಸಂಬಂಧಗಳು ನಶಿಸುವದರೊಂದಿಗೆ ಸಮಾಜದ ಸ್ವಾಸ್ತ್ಯ ಕೆಡುತ್ತಿರುವದು ಇದರ ಪರಿಣಾಮವಾಗಿದೆ ಎಂದರು. ಇಂತಹ ಸೌಹಾರ್ದ ಕೂಟಗಳ ಮೂಲಕ ಸ್ನೇಹ ಸಂಬಂಧ ಬೆಸೆಯಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ತಪೋವನದ ಮುಖ್ಯಸ್ಥರು ಹಾಗೂ ಧರ್ಮಗುರುಗಳಾದ ಫಾದರ್ ಬರ್ನಬಸ್ ಅವರ ನೇತೃತ್ವದಲ್ಲಿ ನಡೆದ ಸೌಹಾರ್ದ ಕೂಟದಲ್ಲಿ ವಿವಿಧ ಧರ್ಮೀಯರು ಪಾಲ್ಗೊಂಡಿದ್ದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ. ಚಂದ್ರಕಲಾ, ಉದ್ಯಮಿ ಪೊನ್ನಚ್ಚನ ಮೋಹನ್, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಂಚಾಲಕ ಎಂ.ಎನ್. ಚಂದ್ರಮೋಹನ್, ಉಪನ್ಯಾಸಕ ನಾಗರಾಜ್ ಮಾತನಾಡಿದರು.
ತಪೋವನದ ಸಹೋದರರಿಂದ ಗೀತೆ, ಕ್ರಿಸ್ಮಸ್ ಭಜನೆ, ಹಾಸ್ಯ ನಾಟಕ, ವಿದ್ಯಾರ್ಥಿಗಳಿಂದ ನೃತ್ಯ ಮುಂತಾದ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭ ಕಾರ್ಮೆಲ್ ಮಠದ ಫಾ. ಜೀವನ್, ಫಾ. ಅಶ್ವಿನ್, ಫಾ. ಗ್ರೆಗರಿ, ಕಾರ್ಮೆಲ್ ಸಭೆ ಸದಸ್ಯರು, ನೆರೆಹೊರೆಯ ನಿವಾಸಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಿಕ್ಷಕ ಅಂಥೋಣಿ ಪ್ರಭು ಕಾರ್ಯಕ್ರಮ ನಿರೂಪಿಸಿದರು, ಮಠದ ಮುಖಸ್ಥ ಫಾ. ಬರ್ನಬಸ್ ಸ್ವಾಗತಿಸಿ, ಫಾ. ಜೀವನ್ ವಂದಿಸಿದರು.