ಮೂರ್ನಾಡು, ಡಿ. 29: ಶಿಕ್ಷಣದಿಂದ ಸಮಾಜಕ್ಕೆ ಒಳ್ಳೆಯದು ಸಂಭವಿಸುತ್ತದೆ. ಕೆಟ್ಟದೂ ಸಂಭವಿಸುತ್ತದೆ. ಶಿಕ್ಷಣ ಮಾತ್ರ ಮುಖ್ಯವೆನಿಸುವದಿಲ್ಲ. ಸಮಾಜಕ್ಕೆ ಮೌಲಿಕ ಶಿಕ್ಷಣದ ಅಗತ್ಯತೆ ಇದೆ ಎಂದು ವಕೀಲ ಕೆ.ಪಿ. ಬಾಲ ಸುಬ್ರಮಣ್ಯ ಹೇಳಿದರು.

ಮೂರ್ನಾಡು ಜ್ಞಾನ ಜ್ಯೋತಿ ವಿದ್ಯಾಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ವಿದ್ಯೆ ಕಲಿತವರೇ ದೇಶದ ಅಭಿವೃದ್ಧಿಗೆ ಕಾರಣಕರ್ತರಾದರೂ ಅಳಿವಿಗೂ ವಿದ್ಯಾವಂತರೇ ಕಾರಣರಾಗಿದ್ದಾರೆ. ಶಾಲೆಗಳಲ್ಲಿ ಕೇವಲ ಅಂಕಗಳು ಮಾತ್ರ ಪರಿಗಣನೆಯಾದರೆ ಸಾಲದು. ವಿನಯ, ಸೌಜನ್ಯ, ಉಪಕಾರ ಮನೋಭಾವಗಳ ಪರಿಪಕ್ವತೆ ವಿದ್ಯಾರ್ಥಿಗಳಲ್ಲಿ ಒಡಮೂಡಬೇಕು ಎಂದರು.

ಶಿಕ್ಷಕರು ಪಾಠಪ್ರವಚನಗಳಿಗೆ ಮಾತ್ರ ಪ್ರಾಮುಖ್ಯತೆ ನೀಡದೆ ಪಠ್ಯೇತರ ವಿಚಾರಗಳ ಬಗ್ಗೆ ತಿಳಿದುಕೊಂಡು, ವಿದ್ಯಾರ್ಥಿಗಳಿಗೆ ವಿವರಿಸಿಕೊಡು ವಂತಾಗಬೇಕು. ಮಕ್ಕಳು ಒದ್ದೆ ಗೋಡೆಯಿದ್ದಂತೆ. ಗೋಡೆಗೆ ಚೆಂಡನ್ನು ಎಸೆದರೆ ಅದು ಅಲ್ಲಿಯೇ ಅಂಟಿಕೊಳ್ಳುತ್ತದೆ. ಹಾಗೆ ಮಕ್ಕಳು ಎಲ್ಲಾ ವಿಷಯಗಳನ್ನು ಅರಗಿಸಿ ಕೊಳ್ಳುತ್ತಾರೆ ಎಂದು ಬೊಟ್ಟು ಮಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಅಧ್ಯಕ್ಷ ಮಾಳೇಟಿರ ನವೀನ್ ಕಾರ್ಯಪ್ಪ ವಹಿಸಿದ್ದರು. ವೇದಿಕೆಯಲ್ಲಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಮುಕ್ಕಾಟಿರ ರವಿ ಚೀಯಣ್ಣ, ಕಾರ್ಯದರ್ಶಿ ಡಾ. ಜೆ.ಎ. ಕುಂಞ್ಞ ಅಬ್ದುಲ್ಲಾ, ಖಜಾಂಚಿ ಬುಡುವಂದ ಬೆಲ್ಲು ಚಿಣ್ಣಪ್ಪ, ನಿರ್ದೇಶಕರಾದ ಬಡುವಂಡ ಎ. ವಿಜಯ, ಎನ್.ಒ. ಮ್ಯಾಥ್ಯು, ಬಡುವಂಡ ಬೋಪಣ್ಣ, ಅವರೆಮಾದಂಡ ಸುಗುಣ ಸುಬ್ಬಯ್ಯ ಉಪಸ್ಥಿತರಿದ್ದರು.

ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮತ್ತು ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸ ಲಾಯಿತು. ವಿದ್ಯಾರ್ಥಿಗಳಿಂದ ಏರ್ಪಡಿಸಲಾಗಿದ್ದ ವಸ್ತು ಪ್ರದರ್ಶನವನ್ನು ಪೋಷಕರು ವೀಕ್ಷಿಸಿದರು. ಶಾಲಾ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮ ನೆರೆದ ಸಭಿಕರ ಮನರಂಜಿಸಿತು.

ಶಾಲಾ ವಿದ್ಯಾರ್ಥಿನಿ ತೀರ್ಥ ತಂಗಮ್ಮ ಪ್ರಾರ್ಥಿಸಿ, ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಶೀಲಾ ಅಬ್ದುಲ್ಲಾ ಶಾಲಾ ವರದಿ ವಾಚಿಸಿದರು. ಜಾವೀರ್ ಕಾರ್ಯಕ್ರಮ ನಿರೂಪಿಸಿ, ಬಿಮಲ್ ವಂದಿಸಿದರು.