ಮಡಿಕೇರಿ, ಡಿ. 29: ನಮ್ಮ ಸುತ್ತಮುತ್ತ ಇರುವ ಪರಿಸರ, ಅರಣ್ಯ, ಜಲ ಮೂಲಗಳು ಹಾಗೂ ವನ್ಯ ಜೀವಿಗಳನ್ನು ನಮ್ಮ ಮಕ್ಕಳಿಗೂ, ಮುಂಬರುವ ಜನಾಂಗಕ್ಕೂ ಹಸ್ತಾಂತರ ಮಾಡುವ ಗುರುತರ ಜವಾಬ್ದಾರಿಯ ಸಂಧಿಗ್ಧ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ವೈದ್ಯ ಮತ್ತು ಪಕ್ಷಿ ತಜ್ಞ ಡಾ. ಎಸ್.ವಿ. ನರಸಿಂಹನ್ ಹೇಳಿದ್ದಾರೆ.

ಇತ್ತೀಚೆಗೆ ಕೊಡಗರಹಳ್ಳಿ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢಶಾಲಾ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಪರಿಸರವನ್ನು ಪಶು, ಪಕ್ಷಿ, ಪ್ರಾಣಿಗಳಾಗಲಿ ರಕ್ಷಿಸಲು ಸಾಧ್ಯವಿಲ್ಲ. ಮನುಷ್ಯರು ಮಾತ್ರ ರಕ್ಷಿಸಲು ಸಾಧ್ಯ. ಆದರೆ, ದುರಾಸೆಯ ಹಿನ್ನೆಲೆ ಭಕ್ಷಿಸುತ್ತಿದ್ದು, ಪರಿಸರ ಸಂರಕ್ಷಣೆ ಮಾಡದೇ ಹೋದರೆ ಕೆಲವೇ ದಶಕಗಳಲ್ಲಿ ಮಾನವ ಕುಲ ನಶಿಸಿ ಹೋಗುವ ಅಪಾಯವಿದೆ ಎಂದು ನುಡಿದರು.

ಮಕ್ಕಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಮಾನವಾಗಿ ತೊಡಗಿಸಿಕೊಳ್ಳುವದರ ಮೂಲಕ ತಮ್ಮ ಆಸಕ್ತಿ ವಿಷಯದಲ್ಲಿ ಮುಂದುವರೆಯಲು ಪೋಷಕರು ಅವರಿಗೆ ಬೆಂಬಲವಾಗಿ ನಿಲ್ಲಬೇಕೆಂದು ನರಸಿಂಹನ್ ಕಿವಿಮಾತು ಹೇಳಿದರು.

ಅತಿಥಿಗಳಾಗಿ ಪಾಲ್ಗೊಂಡಿದ್ದ ಸೈನಿಕ ಶಾಲೆಯ ಪ್ರಾಂಶುಪಾಲ ಗ್ರೂಪ್ ಕ್ಯಾ. ಆರ್.ಆರ್. ಲಾಲ್ ಮಾತನಾಡಿ, ಮಕ್ಕಳ ಶಿಸ್ತುಬದ್ಧ ಕವಾಯತು ಮತ್ತು ಪೋಷಕರ ಶಿಸ್ತು ಬದ್ಧ ನಡವಳಿಕೆ ತಮಗೆ ಅತ್ಯಂತ ಪ್ರಿಯವಾದ ಸಂಗತಿಗಳಾದವು ಎಂದು ಹೇಳಿದರಲ್ಲದೆ. ಗ್ರಾಮಾಂತರ ಮಟ್ಟದಲ್ಲಿ ಇಂತಹ ಸುಸಜ್ಜಿತವಾದ, ಶಿಸ್ತುಬದ್ಧ ಶಿಕ್ಷಣ ಸಂಸ್ಥೆಯ ಬೆಳವಣಿಗೆಯನ್ನು ನೋಡಿ ಸಂತೋಷವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಸಭೆಯ ಅಧ್ಯಕ್ಷತೆಯನ್ನು ಭಾರತೀಯ ಎಜುಕೇಷನ್ ಸರ್ವಿಸ್ ಟ್ರಸ್ಟ್‍ನ ಕಾರ್ಯದರ್ಶಿ ಸಿ.ಎ. ಉತ್ತಯ್ಯ ವಹಿಸಿದ್ದರು. ಶಾಲಾ ವಾರ್ಷಿಕ ವರದಿಯನ್ನು ಟ್ರಸ್ಟ್‍ನ ಖಜಾಂಚಿ ಎಂ.ಎನ್. ಹರೀಶ್ ಮಂಡಿಸಿದರು.

ವೇದಿಕೆಯಲ್ಲಿ ಭಾರತೀಯ ಎಜುಕೇಷನಲ್ ಸರ್ವೀಸ್ ಟ್ರಸ್ಟ್‍ನ ಟ್ರಸ್ಟಿಗಳಾದ ಪಿ.ಎಂ. ರಂಜಿತ್ ಕಾರ್ಯಪ್ಪ, ಅನಿಲ್ ಪೊನ್ನಪ್ಪ, ರಶೀದ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಮೇರಿ ಫಾತಿಮ ಶಾಲಾ ವಾರ್ಷಿಕ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಕುರಿತು ವಿವರಿಸಿದರಲ್ಲದೆ, ಶಾಲೆಯ ಅಭಿವೃದ್ಧಿಗೆ ಸಹಕಾರ ಕೋರಿದರು.

ಶಾಲಾ ಮಕ್ಕಳಿಂದ ಶಾಂತಿನಿಕೇತನ ಕಲೋತ್ಸವ ಎಂಬ ಹೆಸರಿನಲ್ಲಿ ವಿವಿಧ ಕಾರ್ಯಕ್ರಮಗಳು ನಡೆದು ಪೋಷಕರು, ಅತಿಥಿಗಳು ಮತ್ತು ಸಾರ್ವಜನಿಕರನ್ನು ಮಂತ್ರ ಮುಗ್ಧವಾಗಿಸಿದವು.